ಬೆಂಗಳೂರು, ಆ.25-ಸರ್ಕಾರದಲ್ಲಿ ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕೇ ಬೇಡವೇ ಎಂಬ ಗೊಂದಲ ಈ ಕ್ಷಣದವರೆಗೂ ಮುಂದುವರೆದಿದೆ.
ಕೆಲವರು ಉಪಮುಖ್ಯಮಂತ್ರಿ ಹುದ್ದೆ ರಚನೆ ಮಾಡುವುದರಿಂದ ಮತ್ತೊಂದು ಅಧಿಕಾರ ಕೇಂದ್ರ ಸೃಷ್ಟಿಯಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಬಣ ರಾಜಕೀಯ ನಿರ್ಮಾಣವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಕೆಲವು ಶಾಸಕರು ಡಿಸಿಎಂ ಹುದ್ದೆಯ ಅಗತ್ಯತೆ ಪ್ರತಿಪಾದಿಸಿದ್ದಾರೆ. ಭವಿಷ್ಯದ ಹಿತದೃಷ್ಟಿಯಿಂದ ಇದು ಒಳ್ಳೆಯ ಆಲೋಚನೆ. ಹೀಗಾಗಿ ಸಮುದಾಯಕ್ಕೊಂದರಂತೆ 3 ರಿಂದ 4 ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಸಿಎಂ ಬಿಎಸ್ವೈ ಬಳಿ ಮನವಿ ಮಾಡಿದ್ದಾರೆ. ಆದರೆ ಯಡಿಯೂರಪ್ಪ ಒಕ್ಕಲಿಗ ಸಮುದಾಯದಲ್ಲಿ ಮಲ್ಲೇಶ್ವರಂನ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರನ್ನು ಮಂತ್ರಿ ಮಾಡಿದರೆ ಆ ಸಮುದಾಯಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂಬ ಆತಂಕದಲ್ಲಿದ್ದಾರೆ. ಹಿರಿತನ, ಪಕ್ಷಕ್ಕೆ ಸಲ್ಲಿಸಿರುವ ಸೇವೆಯಲ್ಲಿ ಪದ್ಮನಾಭ ನಗರದ ಆರ್.ಅಶೋಕ್ ಅವರನ್ನು ಕಡೆಗಣಿಸಿದರೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಲೆಕ್ಕಾಚಾರವೂ ಇದೆ.
ಅಶೋಕ್ಗೆ ಹೋಲಿಸಿದರೆ ಅಶ್ವತ್ಥನಾರಾಯಣ ಅವರಿಗೆ ಭವಿಷ್ಯದಲ್ಲಿ ಸಾಕಷ್ಟು ಅವಕಾಶಗಳಿವೆ. ಅಲ್ಲದೆ, ಅಶೋಕ್ ಎಲ್ಲಾ ಹಂತದಲ್ಲೂ ಪಕ್ಷಕ್ಕೆ ನಿಷ್ಠೆ ತೋರಿಸಿದ್ದಾರೆ. ಅದೇ ರೀತಿ ಅಶ್ವತ್ಥನಾರಾಯಣ ಕೂಡ ಪಕ್ಷನಿಷ್ಠೆಯಲ್ಲಿ ಹಿಂದೆ ಬಿದ್ದಿಲ್ಲ. ಆಪರೇಷನ್ಕಮಲವನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದೆ ಅವರು. ಹೀಗಾಗಿ ಯಾರಿಗೆ ಕೊಡಬೇಕು ಎಂಬುದು ಬಿಎಸ್ವೈಗೆ ತಲೆನೋವಾಗಿ ಪರಿಣಮಿಸಿದೆ.
ದಲಿತ ಸಮುದಾಯದಿಂದ ಗೋವಿಂದ ಕಾರಜೋಳ, ಕುರುಬ ಸಮುದಾಯದಿಂದ ಕೆ.ಎಸ್.ಈಶ್ವರಪ್ಪ ಮತ್ತು ಗಾಣಿಗ ಸಮುದಾಯದಿಂದ ಲಕ್ಷ್ಮಣ್ ಸವದಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಬಿಎಸ್ವೈ ಸಕಾರಾತ್ಮಕವಾಗಿದ್ದಾರೆ. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಬೆಳಗಾವಿಯ ಉಮೇಶ್ಕತ್ತಿ ಹಾಗೂ ಮಹದೇವಪುರದ ಅರವಿಂದ ಲಿಂಬಾವಳಿಯವರನ್ನು ತೆಗೆದುಕೊಳ್ಳುವುದು ಬಾಲಚಂದ್ರಜಾರಕಿ ಹೊಳಿಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ನೀಡಿದರೆ ಸರ್ಕಾರಕ್ಕೆ ಎದುರಾಗಿದ್ದ ಬಹುತೇಕ ಕಂಟಕ ಮಂಜಿನಂತೆ ಕರಗುತ್ತದೆ.
ಅನರ್ಹಗೊಂಡ ಶಾಸಕರ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾದ ಬಳಿಕ ಮೂರನೇ ಹಂತದ ಸಂಪುಟ ವಿಸ್ತರಣೆಗೆ ಯಡಿಯೂರಪ್ಪ ಕೈ ಹಾಕಲಿದ್ದಾರೆ.ಉಪಮುಖ್ಯಮಂತ್ರಿ ಹುದ್ದೆ ಸಾಂವಿಧಾನಿಕ ಹುದ್ದೆಯಲ್ಲ. ಅದೊಂದು ಆಡಳಿತ ವ್ಯವಸ್ಥೆಯ ಅನುಕೂಲಕ್ಕೆ ಸರ್ಕಾರವೇ ಸೃಷ್ಟಿಸಿಕೊಂಡ ಹುದ್ದೆಯಾಗಿದೆ. ಹೀಗಾಗಿ ಮೂರರಿಂದ 4 ಮಂದಿ ಡಿಸಿಎಂಗಳನ್ನು ಮಾಡಿದರೂ ತಮ್ಮ ಅಧಿಕಾರಕ್ಕೆ ಯಾವುದೇ ರೀತಿಯ ಭಂಗ ಉಂಟಾಗುವುದಿಲ್ಲ ಎಂಬ ದೂರದೃಷ್ಟಿ ಇಟ್ಟುಕೊಂಡೇ ಬಿಎಸ್ವೈ ತಂತ್ರ ಹೆಣೆದಿದ್ದಾರೆ.
ಇನ್ನೊಂದು ಮೂಲಗಳ ಪ್ರಕಾರ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲು ಯಡಿಯೂರಪ್ಪನವರೇ ಉತ್ಸುಕತೆ ತೋರಿದ್ದಾರೆ ಎನ್ನಲಾಗುತ್ತಿದೆ. ಸಮುದಾಯಕ್ಕೊಂದು ಸ್ಥಾನ ನೀಡಿದರೆ ಎಲ್ಲಾ ಶಾಸಕರು ತಮ್ಮ ಬೆಂಬಲಕ್ಕೆ ನಿಲ್ಲಬಹುದು. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಗೊಂದಲ, ಅಸಮಾಧಾನ ಮತ್ತು ಭಿನ್ನಮತ ಇರುವುದಿಲ್ಲ ಎಂಬುದೇ ಅವರ ಲೆಕ್ಕಾಚಾರವಾಗಿದೆ.
ಉಪಮುಖ್ಯಮಂತ್ರಿ ಸ್ಥಾನ ಇರುತ್ತದೋ ಇಲ್ಲವೋ ಎಂಬುದು ನಾಳೆಯೊಳಗೆ ಸ್ಪಷ್ಟವಾಗಲಿದೆ.