ಬಹುಮುಖ ಪ್ರತಿಭೆಯ ಆಪ್ತ ಮಿತ್ರನ ಕಳೆದುಕೊಂಡೆ-ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಆ.24- ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅರುಣ್ ಜೇಟ್ಲಿ ಅಮೂಲ್ಯ ವಜ್ರದಂತಿದ್ದರು.
ಎಷ್ಟೋ ಸಂದರ್ಭದಲ್ಲಿ ಮೋದಿ ಜೇಟ್ಲಿ ಅವರನ್ನು ಚಾಣಕ್ಯ, ಮಹಾ ವಿದ್ವಾಂಸ ಮತ್ತು ಅತ್ಯಂತ ಕುಶಲ ಸಚಿವ ಎಂದೇ ಬಣ್ಣಿಸಿದ್ದರು.
ಅರುಣ್ ಜೇಟ್ಲಿ ಬಗ್ಗೆ ಪ್ರಧಾನಿ ಮೋದಿಗೆ ಮೊದಲಿನಿಂದಲೂ ವಿಶೇಷ ಒಲವು. ಅತ್ಯಂತ ವರ್ಚಸ್ಸಿನ ನಾಯಕರಾಗಿದ್ದ ಜೇಟ್ಲಿ ಅವರನ್ನು ವಾಜಪೇಯಿ ಸಹ ಬಹುವಾಗಿ ಮೆಚ್ಚಿಕೊಂಡಿದ್ದರು.
ಜೇಟ್ಲಿ ನಿಧನಕ್ಕೆ ಕಂಬನಿ ಮಿಡಿದಿರುವ ಪ್ರಧಾನಿ ಬಹುಮುಖ ಪ್ರತಿಭೆಯ ಆಪ್ತ ಮಿತ್ರನ ಕಳೆದುಕೊಂಡೆ ಎಂದು ಸಂತಾಪ ಸೂಚಿಸಿದ್ದಾರೆ.

ಅರುಣ್ ಜೇಟ್ಲಿ ನಿಧನಕ್ಕೆ ಗಣ್ಯಾತಿಗಣ್ಯರ ಸಂತಾಪ
ನವದೆಹಲಿ, ಆ.24- ಅರುಣ್ ಜೇಟ್ಲಿ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಡಾ.ಎಂ. ವೆಂಕಯ್ಯ ನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆದ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ ಸೇರಿದಂತೆ ಕೇಂದ್ರ ಸಂಪುಟದ ಸದಸ್ಯರು, ಮಾಜಿ ಪ್ರಧಾನಿಗಳಾದ ಡಾ. ಮನಮೋಹನ್ ಸಿಂಗ್, ಎಚ್.ಡಿ.ದೇವೇಗೌಡ, ಯುಪಿಎ ಅಧ್ಯಕ್ಷ ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಗುಲಾಂ ನಬಿ ಅಜಾದ್, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಅನೇಕ ರಾಜಕೀಯ ಪಕ್ಷಗಳ ನಾಯಕರು, ಹಲವಾರು ಕ್ಷೇತ್ರಗಳ ಗಣ್ಯರು ಮತ್ತು ಉದ್ಯಮಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಜ್ಯವನ್ನು ಪ್ರತಿನಿಧಿಸಿರುವ ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಪ್ರಹ್ಲಾದ್ ಜೋಷಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಮಾಜಿ ಮುಖ್ಯಮಂತ್ರಿಗಳಾದ ಸಿದ್ಯರಾಮಯ್ಯ ಮತ್ತು ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ರಾಜ್ಯದ ಅನೇಕ ಗಣ್ಯಾತಿಗಣ್ಯರೂ ಸಹ ಜೇಟ್ಲಿ ನಿಧನಕ್ಕೆ ಸಂತಾಪ ಸೂಚಿಸಿ ಅವರ ಗುಣಗಾನ ಮಾಡಿದ್ದಾರೆ.

ಬಿಜೆಪಿಯ ಅತ್ಯಂತ ವರ್ಚಸ್ಸಿನ ನಾಯಕರಲ್ಲಿ ಒಬ್ಬರಾಗಿದ್ದ ಅರುಣ್ ಜೇಟ್ಲಿ
ನವದೆಹಲಿ, ಆ.24- ಬಿಜೆಪಿಯ ಅತ್ಯಂತ ವರ್ಚಸ್ಸಿನ ನಾಯಕರಲ್ಲಿ ಒಬ್ಬರಾಗಿದ್ದ ಅರುಣ್ ಜೇಟ್ಲಿ 2014 ರಿಂದ 2019ರವರೆಗೆ ಹಣಕಾಸು ಮತ್ತು ಕಾಪೆರ್Çರೇಟ್ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಈ ಹಿಂದೆ ಅವರು ರಕ್ಷಣಾ, ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಕಾನೂನು ಮತ್ತು ನ್ಯಾಯ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿಯಾಗಿದ್ದಾಗ ಕೇಂದ್ರ ಸಚಿವರಾಗಿ ಕೆಲವು ಮಹತ್ವದ ಖಾತೆಗಳನ್ನು ನಿಭಾಯಿಸಿದ್ದರು.
2009ರಿಂದ 2014ರವರೆಗೆ ಅವರು ರಾಜ್ಯಸಭೆಯ ವಿರೋಧಪಕ್ಷದ ನಾಯಕರಾಗಿಯೂ ಕೆಲಸ ಮಾಡಿದ್ದರು.
ಸುಪ್ರೀಂಕೋರ್ಟ್‍ನ ಹಿರಿಯ ವಕೀಲರಾಗಿಯೂ ಗುರುತಿಸಿಕೊಂಡಿದ್ದ ಜೇಟ್ಲಿ ಕಾನೂನು ಮತ್ತು ಹಣಕಾಸು ವಿಷಯದಲ್ಲಿ ಅಪಾರ ಪಾಂಡಿತ್ಯ ಪಡೆದಿದ್ದರು. ಅನಾರೋಗ್ಯ ಕಾರಣದಿಂದಾಗಿ ಅವರು 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಪುಟ ಸೇರಲು ನಿರಾಕರಿಸಿದ್ದರು.
ಬಾಲ್ಯ ಮತ್ತು ಸಾಧನೆಗಳು: ಅರುಣ್ ಜೇಟ್ಲಿ 28ನೇ ಡಿಸೆಂಬರ್ 1052ರಲ್ಲಿ ನವದೆಹಲಿಯಲ್ಲಿ ಜನಿಸಿದರು. ಇವರು ತಂದೆ ಮಹಾರಾಜ್ ಕಿಶೆನ್ ಜೇಟ್ಲಿ ವಕೀಲರಾಗಿದ್ದರು. ಅವರ ತಾಯಿ ರತನ್ ಪ್ರಭಾ ಜೇಟ್ಲಿ ಗೃಹಿಣಿಯಾಗಿದ್ದರು.
ದೆಹಲಿಯ ಸೇಂಟ್ ಕ್ಸೇವಿಯರ್ಸ್ ಸ್ಕೂರ್ ನಲ್ಲಿ 1957ರಿಂದ 69ರವರೆಗೆ ಶಾಲಾ ಶಿಕ್ಷಣ ಪೂರೈಸಿದ ಅವರು, 1973ರಲ್ಲಿ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್‍ನಿಂದ ಪದವ ಪಡೆದರು. ನಂತರ 1977ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಎಲ್‍ಎಲ್‍ಬಿ ಕಾನೂನು ಪದವಿ ಗಳಿಸಿದರು.
ವಿದ್ಯಾರ್ಥಿ ದಿಸೆಯಿಂದಲೂ ಅವರಲ್ಲಿ ನಾಯಕತ್ವದ ಗುಣ ಮೈಗೂಡಿತ್ತು. ಎಪ್ಪತ್ತರ ದಶಕದಲ್ಲಿ ದೆಹಲಿ ವಿಧಿ ಕ್ಯಾಂಪಸ್‍ನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ವಿದ್ಯಾರ್ಥಿ ನಾಯಕರಾಗಿ ಹಲವಾರು ಹೋರಾಟಗಳಲ್ಲಿ ಭಾಗವಹಿಸಿದ್ದರು.
1975 ರಿಂದ 77ರವರೆಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದಾಗ ಕೆಲ ಕಾಲ ಜೇಟ್ಲಿ ಬಂಧನಕ್ಕೊಳಗಾಗಿದ್ದರು. ರಾಜ್ ನಾರಾಯಣ್ ಮತ್ತು ಜಯಪ್ರಕಾಶ್ ನಾರಾಯಣ್ ಅವರ ಹೋರಾಟಗಳಿಂದ ಪ್ರಭಾವಿತರಾಗಿದ್ದ ಅರುಣ್ ಜೇಟ್ಲಿ, ಹಲವು ಹೋರಾಟಗಳಲ್ಲಿಯೂ ಗುರುತಿಸಿಕೊಂಡಿದ್ದರು. ಇವರು ಜನಸಂಘದಲ್ಲೂ ಸಕ್ರಿಯವಾಗಿದ್ದರು.
ಜೇಟ್ಲಿ ಅವರ ನಾಯಕತ್ವ ಗುಣ ಮತ್ತು ಸಂಘಟನಾ ಸಾಮಥ್ರ್ಯದಿಂದ ಆಗಿನ ಅಗ್ರ ನಾಯಕರೇ ಚಕಿತರಾಗಿದ್ದರು. 1977ರಲ್ಲಿ ಲೋಕತಾಂತ್ರಿಕ್ ಯುವ ಮೋರ್ಚಾದ ಸಂಚಾಲಕರಾದರು. ನಂತರ ಅವರು ದೆಹಲಿಯ ಎಬಿವಿಪಿ ಅಧ್ಯಕ್ಷರನ್ನಾಗಿ ಮತ್ತು ನಂತರ ಪರಿಷತ್ತಿನ ಅಖಿಲ ಭಾರತ ಕಾರ್ಯದರ್ಶಿಯಾಗಿ ನೇಮಕಗೊಂಡರು. ನಂತರ ಇವರು ಭಾರತೀಯ ಯುವ ಮೋರ್ಚಾ ಅಧ್ಯಕ್ಷರಾಗಿ ಚುನಾಯಿತರಾದರು. ಬಳಿಕ 1980ರಲ್ಲಿ ದೆಹಲಿ ಬಿಜೆಪಿ ಘಟಕದ ಕಾರ್ಯದರ್ಶಿಯಾದರು.
ಈ ಮಧ್ಯೆ, ಅರುಣ್ ಜೇಟ್ಲಿ ಅವರು 1987ರಿಂದ ದೆಹಲಿ ಸೇರಿದಂತೆ ದೇಶದ ವಿವಿಧ ನ್ಯಾಯಾಲಯಗಳಿಗೆ ಮತ್ತು ಸುಪ್ರೀಂಕೋರ್ಟ್‍ನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದ್ದರು. ಆಗಿನ ಪ್ರಧಾನಿ ವಿ.ಪಿ.ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ಇವರನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕ ಮಾಡಿತ್ತು. ಬೋಫೆÇೀರ್ಸ್ ಫಿರಂಗಿ ಹಗರಣ ಸೇರಿದಂತೆ ಹಲವು ಪ್ರಮುಖ ಪ್ರಕರಣಗಳಲ್ಲಿ ಅವರು ಆಗಿನ ಕಾಂಗ್ರೆಸ್ ವಿರುದ್ದ ವಕಾಲತ್ತು ವಹಿಸಿದ್ದರು.
ಸಕ್ರಿಯ ರಾಜಕಾರಣ ಪ್ರವೇಶ: 1991ರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸದಸ್ಯರಾಗಿದ್ದರು. 1999ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ವಕ್ತಾರರಾಗಿ ಸೇವೆ ಸಲ್ಲಿಸಿದ್ದರು.
ಅದೇ ವರ್ಷ ವಾಜಪೇಯಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಅರುಣ್ ಜೇಟ್ಲಿ ವಾರ್ತಾ ಮತ್ತು ಪ್ರಚಾರ ಖಾತೆ ರಾಜ್ಯ ಸಚಿವರಾಗಿ ನೇಮಕಗೊಂಡರು. ನಂತರ ಅವರು ವಿತ್ತೀಯ ಖಾತೆ ಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದರು. ಬಳಿಕ ರಾಮ್ ಜೇಠ್ಮಲಾನಿ ರಾಜೀನಾಮೆಯಿಂದ ತೆರವಾದ ಕಾನೂನು, ನ್ಯಾಯ ಮತ್ತು ಕಂಪನಿ ವ್ಯವಹಾರಗಳ ಖಾತೆಯನ್ನು ನಿಭಾಯಿಸಿದರು. 2000ರಲ್ಲಿ ಅವರಿಗೆ ಸಂಪುಟ ಸಚಿವರಾಗಿ ಪದೋನ್ನತಿ ನೀಡಲಾಯಿತು. ಹಡಗು ಖಾತೆ ಸಚಿವರಾಗಿಯೂ ಅವರು ಕೆಲಸ ಮಾಡಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರಗಳಲ್ಲಿ ಮಹತ್ವದ ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಅರುಣ್ ಜೇಟ್ಲಿ ಅನೇಕ ಆರ್ಥಿಕ ಸುಧಾರಣೆ ಕ್ರಮಗಳ ರೂವಾರಿಯೂ ಆಗಿದ್ದಾರೆ.
ವೈಯಕ್ತಿಕ ಜೀವನ: ಅರುಣ್ ಜೇಟ್ಲಿ ಅವರು 1982ರಲ್ಲಿ ಜಮ್ಮು ಮತ್ತು ಕಾಶ್ಮೀರದ ಆಗಿನ ಹಣಕಾಸು ಸಚಿವ ಗಿರಿಧರಿ ಲಾಲ್ ದೋಗ್ರಾ ಅವರ ಪುತ್ರಿ ಸಂಗೀತಾ ಅವರನ್ನು ವಿವಾಹವಾದರು. ಈ ದಂಪತಿಗೆ ರೋಹಮ್ ಮತ್ತು ಸೋನಾಲಿ ಎಂಬ ಇಬ್ಬರು ಮಕ್ಕಳಿದ್ದಾರೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ