ಆ.23-ಕಾಂಗ್ರೆಸ್-ಜೆಡಿಎಸ್ನಿಂದ ಅನರ್ಹ ಗೊಂಡಿರುವ ಶಾಸಕರಿಗೆ ಸುಪ್ರೀಂಕೋರ್ಟ್ನಲ್ಲಿ ನ್ಯಾಯ ಸಿಗಲಿದೆ ಎಂಬ ವಿಶ್ವಾಸವನ್ನು ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ವಿಧಾನಸಭೆ ಸ್ಪೀಕರ್ ರಮೇಶ್ಕುಮಾರ್ ಅವರು ನೀಡಿರುವ ತೀರ್ಪು ಯಾರೊಬ್ಬರೂ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಈಗಾಗಲೇ ಕಾನೂನು ಹೋರಾಟಕ್ಕೆ ಅವರೆಲ್ಲರೂ ಸಿದ್ಧತೆಗಳನ್ನು ನಡೆಸಿದ್ದಾರೆ. ಖಂಡಿತವಾಗಿಯೂ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಹೇಳಿದರು.
ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ನ್ಯಾಯಾಲಯದಲ್ಲಿ ಬೇರೆ ಬೇರೆ ಅರ್ಜಿಗಳ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಚಾರಣೆ ವಿಳಂಬವಾಗಿದೆ. ಇದರಿಂದ ಅವರು ಆತಂಕಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಯಾವ ಕಾರಣಕ್ಕಾಗಿ ದೆಹಲಿಗೆ ಬಂದಿದ್ದಾರೆ ಎಂಬ ಬಗ್ಗೆ ನನಗೂ ಮಾಹಿತಿ ಇಲ್ಲ. ನಮ್ಮ ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡುತ್ತಾರೋ ಇಲ್ಲವೋ ನನಗೆ ತಿಳಿಯದು. ಕಾನೂನು ಹೋರಾಟ ನಡೆಸಲು ವಕೀಲರ ಜೊತೆ ಚರ್ಚಿಸಲು ಬಂದಿರಬಹುದು ಎಂದರು.
ಹೈಕಮಾಂಡ್ ಮೇಲೆ ಒತ್ತಡ ಹೇರುವ ತಂತ್ರ ಯಾರೊಬ್ಬರೂ ಮಾಡುತ್ತಿಲ್ಲ. ಪಕ್ಷ ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ಎಲ್ಲರೂ ಬದ್ಧರಾಗಿರಬೇಕಾಗುತ್ತದೆ. ಸರ್ಕಾರ ರಚನೆಯಾದ ವೇಳೆ ಇಂತಹ ಘಟನೆಗಳು ಸರ್ವೇಸಾಮಾನ್ಯ ಎಂದು ಅಭಿಪ್ರಾಯಪಟ್ಟರು.
ಪಕ್ಷದ ನಾಯಕರು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ವಿಶ್ವಾಸವಿದೆ. ಸಚಿವ ಸ್ಥಾನ ಸಿಗದಿರುವವರು ಆತಂಕಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ. ಎರಡನೇ ಹಂತದಲ್ಲಿ ಕೆಲವರಿಗೆ ಆದ್ಯತೆ ಸಿಗಲಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಸಚಿವ ಅಶ್ವತ್ಥನಾರಾಯಣ ಹಾಗೂ ಬಿ.ವೈ.ವಿಜಯೇಂದ್ರ ಅನರ್ಹ ಶಾಸಕರ ಜೊತೆ ಕೆಲ ಹೊತ್ತು ರಹಸ್ಯ ಮಾತುಕತೆ ನಡೆಸಿದರು.
ನಾವು ನಿಮಗೆ ಎಲ್ಲಾ ರೀತಿಯ ನೆರವು ನೀಡುತ್ತೇವೆ. ನಿಮಗೆ ಅನ್ಯಾಯವಾಗಲು ಬಿಡುವುದಿಲ್ಲ. ಯಡಿಯೂರಪ್ಪನವರು ಕೂಡ ಇದ್ದಕ್ಕೆ ಬದ್ಧವಾಗಿದ್ದಾರೆ.
ಗಾಳಿ ಸುದ್ದಿಗಳಿಗೆ ಕಿವಿಗೊಡಬಾರದೆಂದು ಅಶ್ವತ್ಥನಾರಾಯಣ ಹಾಗೂ ವಿಜಯೇಂದ್ರ ಅನರ್ಹ ಶಾಸಕರಿಗೆ ಧೈರ್ಯ ತುಂಬಿದ್ದಾರೆ.