ಬೆಂಗಳೂರು: ಬಂಡಾಯದ ಬಿಸಿಯಲ್ಲಿರುವ ಬಿಎಸ್ವೈ ನೇತೃತ್ವದ ಬಿಜೆಪಿ ಸರ್ಕಾರ ಶೀಘ್ರದಲ್ಲೇ ಸಂಪುಟ ವಿಸ್ತರಣೆ ಮಾಡುವುದು ಖಚಿತವಾಗಿದೆ. ಅಮಿತ್ ಶಾ ಮತ್ತು ಬಿಜೆಪಿ ಹೈಕಮಾಂಡ್ ಕೂಡ ಯಡಿಯೂರಪ್ಪಗೆ ಗ್ರೀನ್ ಸಿಗ್ನಲ್ ನೀಡಿದೆ. ಹಾಗೆಯೇ, ಕೆಲ ದಿನಗಳ ಹಿಂದೆ ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರಿಗೆ ಖಾತೆ ಹಂಚಿಕೆಯೂ ಫೈನಲ್ ಆಗಿದ್ದು, ಇವತ್ತೇ ಅದು ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.
ಆ. 20, ಮಂಗಳವಾರದಂದು ಯಡಿಯೂರಪ್ಪ ಅವರು ಸಂಪುಟ ರಚನೆ ಮಾಡಿದ್ದರು. ಆ ವೇಳೆ 17 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು. ಅತೃಪ್ತ ಶಾಸಕರಿಗೆಂದು 11 ಸೇರಿ ಒಟ್ಟು 16 ಸಚಿವ ಸ್ಥಾನಗಳನ್ನು ಬಿಎಸ್ವೈ ಬಾಕಿ ಉಳಿಸಿಕೊಂಡಿದ್ದಾರೆ. ಈಗ ಅನರ್ಹ ಶಾಸಕರಿಗೆಂದು ಮೀಸಲಿರಿಸಬೇಕೆಂದಿದ್ದ 11 ಸಚಿವ ಸ್ಥಾನಗಳ ಪೈಕಿ ಒಂದು ಸ್ಥಾನ ಕಡಿಮೆಯಾಗುವ ಸಾಧ್ಯತೆ ಇದೆ.
ಬಿಜೆಪಿಯೊಳಗೆ ಅಸಮಾಧಾನದ ಬೇಗುದಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 6 ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ನೀಡಿ ಸಮಾಧಾನಪಡಿಸಲು ಬಿಎಸ್ವೈ ನಿರ್ಧರಿಸಿದ್ದಾರೆ. ಹೈಕಮಾಂಡ್ ಬಳಿಯೂ ಅವರು ಇದೇ ಬೇಡಿಕೆ ಮುಂದಿಟ್ಟು ಒಪ್ಪಿಗೆಯನ್ನೂ ಪಡೆದಿದ್ದಾರೆ. ಅತೃಪ್ತಿಯ ಕೂಗಿನೊಂದಿಗೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ನೀಡುವುದು ಖಚಿತವೆನ್ನಲಾಗಿದೆ. ಬಿಎಸ್ವೈ ಆಪ್ತ ರೇಣುಕಾಚಾರ್ಯ, ಮುರುಗೇಶ್ ನಿರಾಣಿ ಅವರನ್ನೂ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ನಿರೀಕ್ಷೆ ಇದೆ. ಹಾಗೆಯೇ, ಹೈದರಾಬಾದ್-ಕರ್ನಾಟಕ ಭಾಗದ ಶಾಸಕ ರಾಜೂಗೌಡ ಅವರಿಗೂ ಸ್ಥಾನ ಸಿಗಬಹುದೆನ್ನಲಾಗಿದೆ.
ಮಂತ್ರಿಭಾಗ್ಯ ಪಡೆಯಲಿರುವವರು?
ಉಮೇಶ್ ಕತ್ತಿ, ತಿಪ್ಪಾರೆಡ್ಡಿ, ಅರವಿಂದ್ ಲಿಂಬಾವಳಿ, ಮುರುಗೇಶ್ ನಿರಾಣಿ, ರಾಜೂ ಗೌಡ ಮತ್ತು ಎಂ.ಪಿ. ರೇಣುಕಾಚಾರ್ಯ.
ಇನ್ನುಳಿದ 10 ಸಚಿವ ಸ್ಥಾನಗಳನ್ನ ಅನರ್ಹ ಶಾಸಕರಿಗೆ ಮೀಸಲಿಡಲಾಗಬಹುದು. ರಮೇಶ್ ಜಾರಕಿಹೊಳಿ, ಹೆಚ್. ವಿಶ್ವನಾಥ್, ಮಹೇಶ್ ಕುಮಠಳ್ಳಿ, ಬಿ.ಸಿ. ಪಾಟೀಲ್, ಭೈರತಿ ಬಸವರಾಜು, ಎಸ್.ಟಿ. ಸೋಮಶೇಖರ್, ಎಂಟಿಬಿ ನಾಗರಾಜು, ಆರ್. ಶಂಕರ್ ಹಾಗೂ ಮತ್ತಿಬ್ಬರಿಗೆ ಪ್ರಮುಖ ಖಾತೆಗಳಿರುವ ಸಚಿವ ಸ್ಥಾನವನ್ನು ನೀಡಲು ಬಿಎಸ್ವೈ ನಿರ್ಧರಿಸಿದ್ಧಾರೆನ್ನಲಾಗಿದೆ.
ಇದೇ ವೇಳೆ, ಮಂಗಳವಾರ ಪ್ರಮಾಣವಚನ ಸ್ವೀಕರಿಸಿದ ನೂತನ ಸಚಿವರಿಗೆ ನಾಲ್ಕು ದಿನಗಳ ಬಳಿಕ ಖಾತೆ ಭಾಗ್ಯ ಸಿಗುವ ನಿರೀಕ್ಷೆ ಇದೆ. ಎಲ್ಲಾ 17 ಶಾಸಕರಿಗೂ ಖಾತೆ ಹಂಚಿಕೆ ಅಂತಿಮವಾಗಿದ್ದು ಇವತ್ತು ಮಧ್ಯಾಹ್ನ ಅಧಿಕೃತವಾಗಿ ಪ್ರಕಟವಾಗಲಿದೆ.
ಕೆ.ಎಸ್. ಈಶ್ವರಪ್ಪ ಅವರಿಗೆ ಗೃಹ ಖಾತೆ ಸಿಗುವುದು ಪಕ್ಕಾ ಆಗಿದೆ. ಕಳೆದ ಬಾರಿಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೃಹ ಖಾತೆ ಹೊಂದಿದ್ದ ಆರ್ ಅಶೋಕ್ ಅವರಿಗೆ ಸಾರಿಗೆ ಅಥವಾ ಇಂಧನ ಖಾತೆ ಸಿಗಬಹುದು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕಂದಾಯ ಖಾತೆಯನ್ನು ಪಡೆಯಬಹುದು. ಪ್ರಮುಖವಾದ ಜಲಸಂಪನ್ಮೂಲ ಖಾತೆಯು ಬಸವರಾಜು ಬೊಮ್ಮಾಯಿ ಪಾಲಾಗಬಹುದೆನ್ನಲಾಗಿದೆ.
ಸಚಿವರಿಗೆ ಸಂಭಾವ್ಯ ಖಾತೆಗಳು:
1) ಕೆ.ಎಸ್. ಈಶ್ವರಪ್ಪ – ಗೃಹ
2) ಜಗದೀಶ್ ಶೆಟ್ಟರ್- ಕಂದಾಯ
3) ಬಸವರಾಜ ಬೊಮ್ಮಾಯಿ- ಜಲಸಂಪನ್ಮೂಲ
4) ಲಕ್ಷ್ಮಣ ಸವದಿ- ಸಹಕಾರ
5) ಆರ್.ಅಶೋಕ- ಸಾರಿಗೆ/ಇಂಧನ
6) ಡಾ. ಅಶ್ವತ್ಥ ನಾರಾಯಣ- ವೈದ್ಯಕೀಯ ಶಿಕ್ಷಣ/ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
7) ಬಿ.ಶ್ರೀರಾಮುಲು- ಲೋಕೋಪಯೋಗಿ/ಸಮಾಜ ಕಲ್ಯಾಣ
8) ಗೋವಿಂದ ಕಾರಜೋಳ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
9) ಎಸ್.ಸುರೇಶ್ ಕುಮಾರ್- ಕಾನೂನು / ಉನ್ನತ ಶಿಕ್ಷಣ
10) ವಿ.ಸೋಮಣ್ಣ- ನಗರಾಭಿವೃದ್ಧಿ/ ವಸತಿ
11) ಸಿ.ಟಿ.ರವಿ- ಅರಣ್ಯ/ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
12) ಕೋಟ ಶ್ರೀನಿವಾಸ್ ಪೂಜಾರಿ- ಬಂದರು ಮತ್ತು ಮೀನುಗಾರಿಕೆ / ಮುಜರಾಯಿ
13) ಜೆ.ಸಿ.ಮಾಧುಸ್ವಾಮಿ- ಸಂಸದೀಯ ವ್ಯವಹಾರ/ ಕೃಷಿ ಮತ್ತು ತೋಟಗಾರಿಕೆ
14) ಸಿ.ಸಿ.ಪಾಟೀಲ್- ಆಹಾರ ಮತ್ತು ನಾಗರೀಕ ಸರಬರಾಜು
15) ಪ್ರಭು ಚೌಹಾಣ್- ಸಣ್ಣ ನೀರಾವರಿ/ ಯುವಜನ ಮತ್ತು ಕ್ರೀಡಾ ಇಲಾಖೆ
16) ಶಶಿಕಲಾ ಜೊಲ್ಲೆ- ಮಹಿಳಾ ಮತ್ತು ಮಕ್ಕಳ ಕಲ್ಯಾಣ
17) ನಾಗೇಶ್- ಸಣ್ಣ ಕೈಗಾರಿಕೆ/ ಪೌರಾಡಳಿತ