ಪ್ರಾಗ್, ಆ.23- ನಮ್ಮ ದೇಶದಲ್ಲಿ ಮಹಾತ್ಮಗಾಂಧಿ ಜನ್ಮದಿನಾಚರಣೆಯಂದು ಮದ್ಯ ಮಾರಾಟ ನಿಷೇಧಿಸುವ ಮೂಲಕ ಭಾರತದ ಪಿತಾಮಹಾನಿಗೆ ಗೌರವ ಸೂಚಿಸುತ್ತಿದ್ದರೆ, ಜೆಕ್ ಗಣರಾಜ್ಯದಲ್ಲಿ ಮಹಾತ್ಮರ ಭಾವಚಿತ್ರ ಹೊಂದಿರುವ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ..!
ಮದ್ಯ ಬಾಟಲಿನ ಮೇಲೆ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಹಾಗೂ ನಮ್ಮ ದೇಶವನ್ನು ಪ್ರತಿನಿಧಿಸುವ ಕೇಸರಿ, ಬಿಳಿ, ಹಸಿರು ಬಣ್ಣ ಹೊಂದಿರುವ ಮಹಾತ್ಮ ಇಂಡಿಯಾ ಪಾಲೆ ಅಲೆ ಎಂಬ ಲೇಬಲ್ ಹೊಂದಿರುವ ಬಿಯರ್‍ಅನ್ನು ಮಾರಾಟ ಮಾಡಲಾಗುತ್ತಿತ್ತು.
ಕಳೆದ ವರ್ಷ ಮಹಾತ್ಮಗಾಂಧಿ ಪೌಂಡೇಷನ್‍ನ ಅಧ್ಯಕ್ಷ ಜೆ.ಜೋಸೆ ಹಾಗೂ ಸ್ನೇಹಿತರು ಜೆಕ್ ಗಣರಾಜ್ಯಕ್ಕೆ ತೆರಳಿದ್ದಾಗ ಅಲ್ಲಿ ಮಹಾತ್ಮಗಾಂಧೀಜಿ ಪೋಟೋ ಹೊಂದಿರುವ ಬಿಯರ್ ಮಾರಾಟವನ್ನು ಕಂಡು ಹೋರಾಟಕ್ಕೆ ಮುಂದಾದರು.
ಈ ಸಂಬಂಧವಾಗಿ ಜೋಸೆ ಅವರು ಜೆಕ್ ಗಣರಾಜ್ಯದ ವಾಣಿಜ್ಯ ಆರ್ಥಿಕ ಸಲಹೆಗಾರ ಮಿನಲ್ ದೋಸ್ತಾಲ್‍ಗೆ ಇ-ಮೇಲ್ ಕಳುಹಿಸಿದ್ದರು.
ಭಾರತ ದೇಶದ ಪಿತಾಮಹ ಎಂದೆನಿಸಿಕೊಂಡಿರುವ ಮಹಾತ್ಮಗಾಂಧೀಜಿ ಅವರ ಪೋಟೋ ಹೊಂದಿರುವ ಮದ್ಯವನ್ನು ಮಾರಾಟ ಮಾಡುತ್ತಿರುವುದು ಮಹಾತ್ಮರಿಗೆ ಹಾಗೂ ದೇಶಕ್ಕೆ ತೋರಿರುವ ಅಗೌರವವಾಗಿದೆ ಎಂದು ಬರೆದಿದ್ದರು.
ಇದಕ್ಕೆ ಸಕ್ರಿಯವಾಗಿ ಪ್ರತಿಕ್ರಿಯಿಸಿರುವ ಮಿನಲ್ ದೋಸ್ತಾನ್ ಜೆಕ್ ಗಣ್ಯರಾಜದಲ್ಲಿ ಆಗಸ್ಟ್ 31 ರಿಂದ ಮಹಾತ್ಮ ಇಂಡಿಯಾ ಪಾಲೆ ಬಿಯರ್ ಅನ್ನು ಮಾರಾಟ ಮಾಡದಂತೆ ಆದೇಶವನ್ನು ಹೊರಡಿಸಿದ್ದಾರೆ.
ಮಹಾತ್ಮ ಗಾಂಧಿ ಹಾಗೂ ಭಾರತವನ್ನು ಪ್ರತಿಬಿಂಬಿಸುವ ತ್ರಿವರ್ಣ ಬಣ್ಣಗಳ ಲೇಬಲ್‍ಗಳನ್ನು ಬಳಸಿ ಬಿಯರ್ ಮಾರಾಟ ಮಾಡುತ್ತಿದ್ದ ಸಂಸ್ಥೆಯು ಕೂಡ ತನ್ನ ತಪ್ಪಿಗಾಗಿ ಕ್ಷಮೆಯಾಚಿಸಿದೆ.