ನವದೆಹಲಿ, ಆ.23-ಅಂತಾರಾಷ್ಟ್ರೀಯ ಗುಣಮಟ್ಟ ನಿರ್ವಹಣೆಯಲ್ಲಿ ವಿಫಲವಾದ ಕಾರಣವೊಡ್ಡಿ ವಿಶ್ವ ಉದ್ದೀಪನ ಮದ್ದು ಪ್ರತಿಬಂಧಕ ಸಂಸ್ಥೆ (ವಲ್ರ್ಡ್ ಆಂಟಿ-ಡೋಪಿಂಗ್ ಏಜೆನ್ಸ್-ವಾಡಾ) ಭಾರತೀಯ ಉದ್ದೀಪನ ಮದ್ದು ಪರೀಕ್ಷಾ ಪ್ರಯೋಗಾಲಯ(ಎನ್ಡಿಟಿಎಲ್)ದ ಮಾನ್ಯತೆಯನ್ನು ಆರು ತಿಂಗಳ ಕಾಲ ಅಮಾನತುಗೊಳಿಸಿದೆ.
ಇದು ದೇಶದ ಉದ್ದೀಪನ ಮದ್ದು ವಿರೋಧಿ ಅಭಿಯಾನಕ್ಕೆ ಭಾರೀ ಹಿನ್ನಡೆ ಉಂಟು ಮಾಡಿದೆಯಲ್ಲದೇ ಭಾರತದ ಪ್ರಯೋಗಾಲಯದ ಸಾಮಥ್ರ್ಯ ಮತ್ತು ಕಾರ್ಯ ಕ್ಷಮತೆಯನ್ನು ಪ್ರಶ್ನಿಸುವಂತೆ ಮಾಡಿದೆ.
ಟೋಕಿಯೋ ಒಲಿಂಪಿಕ್ ಕ್ರೀಡಾಕೂಟಕ್ಕೆ ಕೆಲವೇ ತಿಂಗಳು ಇರುವಾಗಲೇ ಈ ಅಹಿತಕರ ಬೆಳವಣಿಗೆ ಭಾರತಕ್ಕೆ ಭಾರೀ ಮುಜುಗರ ಉಂಟು ಮಾಡಿದೆ.
ಈ ಪ್ರಯೋಗಾಲಯವು 2008ರಲ್ಲಿ ವಾಡಾದಿಂದ ಅಧಿಕೃತ ಮಾನ್ಯತೆ ನೀಡಿತ್ತು. ಆದರೆ ಅಂತಾರಾಷ್ಟ್ರೀಯ ಗುಣಮಟ್ಟ ನಿರ್ವಹಣೆಯಲ್ಲಿ ಎನ್ಡಿಟಿಎಲ್ ನಿರೀಕ್ಷಿತ ಮಟ್ಟದ ಸಾಧನೆ ಮಾಡಿಲ್ಲ ಎಂಬ ಕಾರಣವೊಡ್ಡಿ ವಾಡಾ ಆ.20ರಿಂದ ಜಾರಿಗೆ ಬರುವಂತೆ ಭಾರತೀಯ ಪ್ರಯೋಗಾಲಯದ ಮಾನ್ಯತೆಯನ್ನು ಆರು ತಿಂಗಳು ಸಸ್ಪೆಂಡ್ ಮಾಡಿದೆ.
ಈ ಅವಧಿಯಲ್ಲಿ ಎನ್ಡಿಟಿಲ್ ಉದ್ದೀಪನ ಮದ್ದು ಸೇವನೆಯ ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸುವ ಅಧಿಕಾರ ಹೊಂದಿರುವುದಿಲ್ಲ. ಇದು ಭಾರತದ ಕ್ರೀಡಾ ಕ್ಷೇತ್ರಕ್ಕೆ ಹಿನ್ನಡೆಯಾಗಿದೆ.
ಎನ್ಡಿಟಿಎಲ್ನಿಂದ ನಡೆಸುವ ಸ್ಯಾಂಪಲ್ಗಳ ಪರೀಕ್ಷಾ ವಿಧಾನ ತೃಪ್ತಿಕರವಾಗಿಲ್ಲ ಮತ್ತು ನಿರೀಕ್ಷಿತ ಮಟ್ಟದಲ್ಲಿಲ್ಲ ಈ ಕಾರಣದಿಂದ ಆರು ತಿಂಗಳ ಕಾಲ ಭಾರತೀಯ ಪ್ರಯೋಗಾಲಯವನ್ನು ಅಮಾನತ್ತಿನಲ್ಲಿ ಇಡಲಾಗಿದೆ ಎಂದು ವಿಶ್ವ ಪರೀಕ್ಷಾ ಸಂಸ್ಥೆ ವಾಡಾ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ರಾಷ್ಟ್ರೀಯ ಉದ್ದೀಪನ ಮದ್ದು ನಿರೋಧಕ ಸಂಸ್ಥೆ(ನಾಡಾ) ಮಾತ್ರ ಕ್ರೀಡಾ ಪಟುಗಳ ಸ್ಯಾಂಪಲ್ಗಳು(ರಕ್ತ ಮತ್ತು ಮೂತ್ರ)ವನ್ನು ಸಂಗ್ರಹಿಸಬಹುದು. ಆದರೆ ಅದನ್ನು ಇನ್ನು ಆರು ತಿಂಗಳ ಕಾಲ ಭಾರತದೊಳಗೆ ಪರೀಕ್ಷಿಸಲು ಸಾಧ್ಯವಾಗುವುದಿಲ್ಲ. ಈ ಮಾದರಿಗಳನ್ನು ವಾಡಾದಿಂದ ಮಾನ್ಯತೆ ಪಡೆದ ಹೊರತ ದೇಶದ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಇದು ಕ್ರೀಡಾ ಕ್ಷೇತ್ರಕ್ಕೆ ಆತಂಕ ಉಂಟು ಮಾಡಿದೆ.