ತುಮಕೂರು, ಆ.23- ನನಗೆ ಇಂತಹುದೇ ಖಾತೆ ಕೊಡಿ ಎಂದು ಯಾರ ಬಳಿಯೂ ಲಾಬಿ ಮಾಡಿಲ್ಲ. ಜನತೆಗೆ ಹತ್ತಿರವಾಗುವ, ಜನಸೇವೆಗೆ ಅನುಕೂಲವಾಗುವ ಖಾತೆ ನೀಡಿದರೆ ಸಂತೋಷ ಎಂದು ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ನಾನು ರೈತನ ಮಗ. ಗ್ರಾಮೀಣ ಪ್ರದೇಶವಾಗಿರುವ ಪರಿಣಾಮ ನಾವು ಜನರ ಹತ್ತಿರವಾಗಿರಬೇಕು. ಹಾಗಾಗಿ ಅಂತಹ ಖಾತೆಯನ್ನು ಕೊಡಿ ಎಂದಷ್ಟೇ ಮನವಿ ಮಾಡಿರುವುದಾಗಿ ಹೇಳಿದರು.
ಮುಖ್ಯಮಂತ್ರಿಗಳಾಗಿ ಯಡಿಯೂರಪ್ಪನವರಿದ್ದಾರೆ. ಅವರ ಬಳಿ ಜಿಲ್ಲೆಗೆ ಯಾವುದೇ ಯೋಜನೆಗಳನ್ನು ತರಬಹುದು. ಜನಪರ ಕಾರ್ಯಗಳಿಗೆ ಸರ್ಕಾರ ಬದ್ಧವಿದೆ ಎಂದರು.
ಕಾಂಗ್ರೆಸ್ ಮತ್ತೆ ಜೆಡಿಎಸ್ ಪಕ್ಷದ ಅತೃಪ್ತ ಶಾಸಕರ ಹೊರಬಂದ ಪರಿಣಾಮವೇ ಇಂದು ಬಿಜೆಪಿ ಸರ್ಕಾರವನ್ನು ರಚಿಸಲು ಸಾಧ್ಯವಾಗಿದೆ. ಅವರಿಗೆ ಖಾತೆಗಳನ್ನು ನೀಡುವುದು ಎಲ್ಲರಿಗೂ ಒಪ್ಪಿಗೆ ಇದೆ. ಆದರೆ ನ್ಯಾಯಾಲಯದಲ್ಲಿ ಅವರ ಪ್ರಕರಣಗಳಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಅವರಿಗೆ ಖಾತೆ ಹಂಚಿಕೆ ಮಾಡಲು ಸಾಧ್ಯವಾಗಿಲ್ಲ ಎಂದರು.
ಪಕ್ಷದಲ್ಲಿ ಉಮೇಶ್ ಕತ್ತಿ ಹಿರಿಯರಾಗಿದ್ದಾರೆ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗಬೇಕಾಗಿತ್ತು ಆದರೆ ಸಿಕ್ಕಿಲ್ಲ ಮತ್ತೊಮ್ಮೆ ಎರಡನೇ ಬಾರಿ ಸಚಿವ ಸಂಪುಟ ವಿಸ್ತರಣೆಯಾಗುವ ಸಂದರ್ಭದಲ್ಲಿ ಅವಕಾಶಗಳು ಸಿಗುತ್ತವೆ ಯಾರೂ ಕೂಡ ಬಿಜೆಪಿಯಿಂದ ಅಸಮಾಧಾನ ವ್ಯಕ್ತಪಡಿಸಿ ಆಚೆ ಹೋಗುವವರು ಇಲ್ಲ.
ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ನನ್ನ ಹೆಸರಿಲ್ಲ ಎಂಬ ಕೋಪದಲ್ಲಿ ಅವರು ಮಾತನಾಡಿದ್ದಾರೆ ಅಷ್ಟೇ ಎಂದರು.
ಹಳೆಯ ಸರ್ಕಾರಕ್ಕೂ ಈಗಿನ ಸರ್ಕಾರಕ್ಕೂ ವ್ಯತ್ಯಾಸಗಳು ತುಂಬಾ ಇದೆ. ಅಧಿಕಾರಿಗಳು ಎಸಿ ಕಚೇರಿಯಲ್ಲಿ ಕುಳಿತುಕೊಂಡು ಕೆಲಸ ಮಾಡುವ ಕಾಲ ಮುಗಿದೋಯ್ತು.
ಈಗೇನಿದ್ದರೂ ಆಚೆ ಬಂದು ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆಗಳು ತ್ವರಿತವಾಗಿ ಆರಂಭವಾಗಬೇಕು. ಇನ್ನು ಸ್ಮಾರ್ಟ್ಸಿಟಿ ಯೋಜನೆ ಕಾಮಗಾರಿ ಗಳಲ್ಲಿ ಅವ್ಯವಹಾರ ನಡೆದಿರುವ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ಅಧ್ಯಯನ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.