ನವದೆಹಲಿ: ಮಾಜಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆ 7 ನಿಮಿಷಕ್ಕೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.
ಅರುಣ್ ಜೇಟ್ಲಿ ಅವರು ಅನೇಕ ದಿನಗಳಿಂದ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದ ಕಾರಣದಿಂದ ಫೆಬ್ರವರಿಯಲ್ಲಿ ಬಜೆಟ್ ಕೂಡ ಮಂಡನೆ ಮಾಡಿಲ್ಲ.
ಕಳೆದ ಕೆಲವು ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ಅರುಣ್ ಜೇಟ್ಲಿ ಮೇ 23ದಂದು ಏಮ್ಸ್ ನಿಂದ ಡಿಸ್ಚಾರ್ಜ್ ಆಗಿದ್ದರು. ಆರೋಗ್ಯದಲ್ಲಿ ಮತ್ತೆ ಏರುಪೇರು ಕಂಡ ಬಂದ ಹಿನ್ನೆಲೆಯಲ್ಲಿ ಆಗಸ್ಟ್ 9 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಾಗಿದ್ದರು. 66 ವರ್ಷದ ಅರುಣ್ ಜೇಟ್ಲಿ ಅವರನ್ನು ನೆಫ್ರಾಲಜಿಸ್ಟ್, ಹೃದ್ರೋಗ ತಜ್ಞರು ತಪಾಸಣೆ ಮಾಡಿದ್ದರು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಕೇಂದ್ರ ಆರೋಗ್ಯ ಸಚಿವ ಹರ್ಷವಧನ್, ಗೃಹ ಸಚಿವ ಅಮಿತ್ ಶಾ ಅವರು ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಶುಕ್ರವಾರ (ಆಗಸ್ಟ್ 16) ರಾತ್ರಿ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಆಸ್ಪತ್ರೆಗೆ ತೆರಳಿ ಅರುಣ್ ಜೇಟ್ಲಿಯವರ ಆರೋಗ್ಯ ವಿಚಾರಿಸಿದ್ದರು.
66 ವರ್ಷದ ಅರುಣ್ ಜೇಟ್ಲಿ ಈ ಹಿಂದೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅಮೆರಿಕಾಗೆ ತೆರಳಿ ಕ್ಯಾನ್ಸರ್ ಚಿಕಿತ್ಸೆ ಪಡೆದುಕೊಂಡಿದ್ದರು. ಹೀಗಾಗಿ ಈ ವರ್ಷದ ಬಿಜೆಪಿ ಸರ್ಕಾರದ ಫೆಬ್ರವರಿ ಬಜೆಟ್ ನ್ನು ಪಿಯೂಶ್ ಗೋಯಲ್ ಮಂಡಿಸಿದ್ದರು. 2014ರ ಮೋದಿ ಸರ್ಕಾರದಲ್ಲಿ ಅರುಣ್ ಜೇಟ್ಲಿ ಅತ್ಯಂತ ಪ್ರಮುಖ ನಾಯಕರಾಗಿದ್ದು, ವಿತ್ತ ಮತ್ತು ರಕ್ಷಣಾ ಮಂತ್ರಾಲಯದ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಶುಗರ್ ಸಮಸ್ಯೆಯಿಂದ ಬಳಲುತ್ತಿದ್ದ ಅರುಣ್ ಜೇಟ್ಲಿ 2018ರ ಮೇ ನಲ್ಲಿ ಕಿಡ್ನಿ ಕಸಿ(kidney transplant) ಮಾಡಿಸಿಕೊಂಡಿದ್ದರು.
ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅರುಣ್ ಜೇಟ್ಲಿ ಮತ್ತೆ ಹಳೆಯ ಹುರುಪಿನಲ್ಲಿಯೇ ಸಚಿವರಾಗಿ ಕೆಲಸ ಮಾಡಿಕೊಂಡಿದ್ದರು. ಆದರೆ ಅಂದಿನಿಂದ ಅರುಣ್ ಜೇಟ್ಲಿಯವರ ಆರೋಗ್ಯ ಕ್ಷೀಣಿಸುತ್ತಾ ಬಂದಿತ್ತು. ತಮ್ಮ ಆನಾರೋಗ್ಯವನ್ನು ಎಲ್ಲಿಯೂ ತೋರಿಸಿಕೊಳ್ಳದ ಅರುಣ್ ಜೇಟ್ಲಿ ತೆರೆಯ ಹಿಂದೆ ಎಂಬಂತೆ ಪಕ್ಷದ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.