ಪಿ.ಚಿದಂಬರಂರವರಿಗೆ ಸುಪ್ರೀಂಕೋರ್ಟ್‍ನಿಂದ ಮಧ್ಯಂತರ ರಕ್ಷಣೆ ಮಂಜೂರು

ನವದೆಹಲಿ, ಆ.23- ಬಹುಕೋಟಿ ರೂ.ಗಳ ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಬಂಧನದಿಂದ ಕೇಂದ್ರದ ಮಾಜಿ ಸಚಿವ ಮತ್ತು ಕಾಂಗ್ರೆಸ್ ಧುರೀಣ ಪಿ.ಚಿದಂಬರಂ ಅವರಿಗೆ ಸುಪ್ರೀಂಕೋರ್ಟ್ ಇಂದು ಮಧ್ಯಂತರ ರಕ್ಷಣೆ ಮಂಜೂರು ಮಾಡಿದೆ. ಆದಾಗ್ಯೂ ಅವರು ಸಿಬಿಐ ಕಸ್ಟಡಿಯಲ್ಲಿ ಮೂಂದುವರಿಯಲ್ಲಿದ್ದಾರೆ.

ಇಡಿ ಪ್ರಕರಣದಲ್ಲಿ ಮಧ್ಯಂತರ ರಕ್ಷಣೆ ಪಡೆದು. ಸಿಬಿಐ ವಿಷಯದಲ್ಲಿ ನಿರಾಳತೆ ಲಭಿಸದೇ ಇರುವುದರಿಂದ ಚಿದಂಬರಂ ಅವರಿಗೆ ಇಂದು ಮಿಶ್ರಫಲ ಲಭಿಸಿದೆ.
ಮಧ್ಯಂತರ ರಕ್ಷಣೆ ಕೋರಿ ಚಿದಂಬರಂ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಆರ್. ಬಾನುಮತಿ ಮತ್ತು ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ಪೀಠವು ಜಾರಿ ನಿರ್ದೇಶನಾಲಯದ ಬಂಧನ ಕ್ರಮದಿಂದ ರಕ್ಷಣೆ ಮಂಜೂರು ಮಾಡಿತು.

ಆದರೆ ಆಗಸ್ಟ್ 26ರವರೆಗೆ ಸಿಬಿಐ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿರುವುದರಿಂದ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ. ಈ ಎರಡೂ ಪ್ರಕರಣಗಳ ವಿಚಾರಣೆಯನ್ನು ಆ.26ರ ಸೋಮವಾರ ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.

ಇದಕ್ಕೂ ಮುನ್ನ ಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ವಕೀಲ-ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ಹಿರಿಯ ವಕೀಲ ಹಾಗೂ ಕಾಂಗ್ರೆಸ್ ಮುಖಂಡರಾದ ಕಪಿಲ್ ಸಿಬಲ್ ಮತ್ತು ಎ.ಎಂ.ಸಿಂಘ್ವಿ ನಡುವೆ ವಾದ-ವಾಗ್ವಾದ ನಡೆಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ