ಸದಾನಂದಗೌಡ ಬೆಂಗಳೂರು, ಆ.23– ಪರಿಸರ ಹಾಗೂ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಪ್ಲಾಸ್ಟಿಕ್ ನಿಷೇಧ ಮಾಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.
ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಐಪ್ಲೆಕ್-2019 ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ವಸ್ತು ಪ್ರದರ್ಶನದ ವೇಳೆ ಮಾತನಾಡಿದರು.
ಒಟ್ಟು ಪ್ಲಾಸ್ಟಿಕ್ ಬಳಕೆಯಲ್ಲಿ ಒಮ್ಮೆ ಬಳಸಿ ಬಿಸಾಡುವ ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಪ್ರಧಾನಿ ನರೇಂದ್ರ ಮೋದಿ ಗಂಭೀರ ಚಿಂತನೆ ನಡೆಸಿದ್ದಾರೆ.
ಈ ಸಂಬಂಧ ಗಾಂಧಿ ಜಯಂತಿಯಂದು ಈ ಮಹತ್ಕಾರ್ಯಕ್ಕೆ ದೇಶಾದ್ಯಂತ ಚಾಲನೆ ಸಿಗಲಿದೆ.
ಭೂಮಿ, ಅಂತರ್ಜಲ, ಗಾಳಿ ಸೇರಿದಂತೆ ಪ್ರಾಕೃತಿಕ ಸಂಪನ್ಮೂಲಗಳ ಸಂರಕ್ಷಣೆಗೆ ದಿಟ್ಟ ಹೆಜ್ಜೆ ಇಡಲಿದ್ದೇವೆ. ಬಹು ಉಪಯೋಗಿ ಪಾಲಿಮರ್ ಬಳಕೆಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಅನರ್ಹ ಶಾಸಕರ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿ, ಸುಪ್ರೀಂ ಕೋರ್ಟ್ ತೀರ್ಪು ಆಧರಿಸಿ ಕ್ರಮ ಕೈಗೊಳ್ಳುವುದಾಗಿ ಅನರ್ಹರ ಪರ ಬ್ಯಾಟ್ ಬೀಸಿದರು.
ಸಿದ್ದರಾಮಯ್ಯ ಎಲ್ಲೆ ಹೋದರು ಆ ಪಕ್ಷಗಳನ್ನು ಮುಗಿಸುತ್ತಾರೆ. ಹಾಗಾಗಿ ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ತಿಳಿಸಿದರು.
ಕೆಎಸ್ಪಿಎ ಅಧ್ಯಕ್ಷ ವಿಜಯ ಕುಮಾರ್, ಕಾಳಿಕೃಷ್ಣ, ಜಂಟಿ ಕಾರ್ಯದರ್ಶಿ ಕಾಶಿನಾಥ್ ಜಾ, ಪ್ಲಾಸ್ಟಿಕ್ ಫೌಂಡೇಷನ್ ಅಧ್ಯಕ್ಷ ಜಿಗಿಶ್ ಎನ್. ದೋಸಿ, ಪ್ಲೆಕ್ಷಿಕಾನ್ಸಿಲ ಅಧ್ಯಕ್ಷ ರವೀಶ್ ಕಾಮತ್ ಎಸ್.ಕೆ. ನಾಯಕ್, ಕಾಸಿಯಾ ಅಧ್ಯಕ್ಷ ರಾಜು ಮತ್ತಿತರರಿದ್ದರು.