ಕೋಲ್ಕತ್ತಾ, ಆ.23- ದೇಶದೆಲ್ಲೆಡೆ ಇಂದು ಕೃಷ್ಣಜನ್ಮಾಷ್ಟಮಿ ಸಡಗರ ಮನೆ ಮಾಡಿದ್ದರೆ, ಕೋಲ್ಕತ್ತಾದಲ್ಲಿ ಲೋಕನಾಥ ದೇಗುಲದ ಕಾಂಪೌಂಡ್ ಗೋಡೆ ಕುಸಿದು ನಾಲ್ವರು ಕೃಷ್ಣ ಭಕ್ತರು ಸಾವನ್ನಪ್ಪಿದ್ದಾರೆ.
ಕೃಷ್ಣನ ದರ್ಶನ ಪಡೆಯಲು ಇಂದು ಬೆಳಗಿನ ಜಾವದಿಂದಲೇ ನೂರಾರು ಭಕ್ತರು ಪ್ರಸಿದ್ಧ ಲೋಕನಾಥ ದೇಗುಲಕ್ಕೆ ಆಗಮಿಸಿದ್ದರು, ಕೃಷ್ಣನಿಗೆ ಮಾಡಿರುವ ವಿಶಿಷ್ಟ ಅಲಂಕಾರವನ್ನು ಕಣ್ತುಂಬಿಕೊಳ್ಳಬೇಕೆಂಬ ತವಕದಲ್ಲಿದ್ದಾಗಲೇ ದೇಗುಲದ ಗೋಡೆ ಕುಸಿದು ಈ ದುರಂತ ಸಂಭವಿಸಿದೆ.
ಏಕಾಏಕಿ ಗೋಡೆ ಕುಸಿದಿದ್ದರಿಂದ ಕಾಲ್ತುಳಿತವು ಕೂಡ ಉಂಟಾಗಿದ್ದು ನಾಲ್ವರು ಕೃಷ್ಣ ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಹಲವರು ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಕೃಷ್ಣಾ ಜನ್ಮಾಷ್ಟಮಿಯಂದೇ ಕೃಷ್ಣನ ದೇಗುಲದಲ್ಲಿ ಈ ದುರಂತ ಸಂಭವಿಸಿರುವುದು ದುಃಖಕರ ಸಂಗತಿ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ.
ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದ್ದರೆ, ತೀವ್ರತರವಾಗಿ ಗಾಯಗೊಂಡವರಿಗೆ 1 ಲಕ್ಷ ರೂ. ಹಾಗೂ ಸಣ್ಣ ಪುಟ್ಟ ಗಾಯಗೊಂಡವರಿಗೆ 50 ಸಾವಿರ ರೂ.ಗಳ ಪರಿಹಾರವನ್ನು ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.