ನವದೆಹಲಿ, ಆ.23-ಮಾಜಿ ಪ್ರಧಾನಿ ಮತ್ತು ಕಾಂಗ್ರೆಸ್ ಧುರೀಣ ಡಾ. ಮನಮೋಹನ್ ಸಿಂಗ್ ಅವರು ಇಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ದೆಹಲಿಯ ಸಂಸತ್ತಿನಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ರಾಜ್ಯಸಭಾ ಸಭಾಪತಿ ಡಾ. ಎಂ. ವೆಂಕಯ್ಯನಾಯ್ಡು ಅವರು ಡಾ. ಮನಮೋಹನ್ ಸಿಂಗ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಮುಖಂಡರಾದ ರಾಹುಲ್ ಗಾಂಧಿ, ಗುಲಾಂನಬಿ ಅಜಾದ್, ಅನಂದ ಶರ್ಮ, ಅಹಮದ್ ಪಟೇಲ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಹಾಗೂ ಬಿಜೆಪಿಯ ಕೆಲವು ನಾಯಕರು ಈ ಸಮಾರಂಭದಲ್ಲಿ ಹಾಜರಿದ್ದರು.
86 ವರ್ಷಗಳ ಡಾ. ಸಿಂಗ್ ರಾಜಸ್ತಾನದಿಂದ ಸಂಸತ್ತಿನ ಮೇಲ್ಮನೆಗೆ ಅವಿರೋಧವಾಗಿ ಆಯ್ಕೆಯಾದರು. ಈ ಹಿಂದೆ ಅವರು ಅಸ್ಸಾಂನಿಂದ ರಾಜ್ಯಸಭೆಯನ್ನು ಪ್ರತಿನಿಧಿಸಿದ್ದರು.