ತ್ರಿವಳಿ ತಲಾಖ್ ನಿಷೇಧ-ಶಿಕ್ಷಾರ್ಹ ಅಂಶಗಳ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಗಳ ಹಿನ್ನೆಲೆ-ಸುಪ್ರೀಂಕೋರ್ಟ್‍ನಿಂದ ಕೇಂದ್ರಕ್ಕೆ ನೋಟಿಸ್

ನವದೆಹಲಿ, ಆ.23- ಹೊಸದಾಗಿ ಜಾರಿಗೆ ಬಂದಿರುವ ತ್ರಿವಳಿ ತಲಾಖ್ ನಿಷೇಧ ಕಾನೂನಿನಲ್ಲಿರುವ ಶಿಕ್ಷಾರ್ಹ ಅಂಶಗಳ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಗಳ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಇಂದು ಕೇಂದ್ರಕ್ಕೆ ನೋಟಿಸ್ ನೀಡಿದೆ.

ಮುಸ್ಲಿಂ ಸಮುದಾಯದಲ್ಲಿ ಜಾರಿಯಲ್ಲಿರುವ ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಶಾಸನದಲ್ಲಿ ಸ್ಥಳದಲ್ಲೇ ವಿವಾಹ ವಿಚ್ಛೇದನ ನೀಡುವ ಮುಸ್ಲಿಂ ಪುರುಷರಿಗೆ ಮೂರು ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾಗಿದೆ.

ಇದರ ಸಿಂಧುತ್ವವನ್ನು ಪ್ರಶ್ನಿಸಿ ಕೆಲವು ಅರ್ಜಿಗಳನ್ನು ಸುಪ್ರೀಂಕೋರ್ಟ್‍ಗೆ ಸಲ್ಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ ಎಂ.ವಿ.ರಮಣ ಮತ್ತು ಅಜಯ್ ರಪೋ ಅವರನ್ನೊಳಗೊಂಡ ಪೀಠವು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ಪ್ರತ್ಯುತ್ತರ ನೀಡುವಂತೆ ಕೋರಿದೆ.

ಅರ್ಜಿದಾರರಲ್ಲಿ ಒಬ್ಬ ಕಕ್ಷಿದಾರರ ಪರ ವಕಾಲತು ವಹಿಸಿರುವ ಹಿರಿಯ ವಕೀಲ ಸಲ್ಮಾನ್ ಖುರ್ಷಿದ್ ಮುಸ್ಲಿಂ ಮಹಿಳೆಯರ (ವೈವಾಹಿಕ ಹಕ್ಕುಗಳ ರಕ್ಷಣೆ) ಕಾಯ್ದೆ-2019ರಲ್ಲಿ ಕೆಲವು ಅಂಶಗಳು ಸಂವಿಧಾನದ ವಿರುದ್ಧವಾಗಿವೆ ಎಂಬ ಅಂಶವನ್ನು ಪೀಠದ ಗಮನಕ್ಕೆ ತಂದರು.

ಸ್ಥಳದಲ್ಲೇ ತ್ರಿವಳಿ ತಲಾಖ್ ನೀಡುವ ಮುಸ್ಲಿಂ ಪುರುಷರಿಗೆ ಮೂರು ವರ್ಷಗಳವರೆಗೆ ಸಜೆ ಸೇರಿದಂತೆ ಕೆಲವು ಆಯಾಮಗಳು ಈ ಹೊಸ ನಿಯಮದಲ್ಲಿವೆ. ಇದು ಭಾರತೀಯ ಸಂವಿಧಾನಕ್ಕೆ ವಿರುದ್ಧವಾಗಿದ್ದು, ಹೊಸ ಕಾಯ್ದೆಯಲ್ಲಿನ ಅಂಶಗಳ ಸಿಂಧುತ್ವವನ್ನು ಪ್ರಶ್ನಿಸಲು ಅರ್ಹವಾಗಿವೆ ಎಂದರು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಪೀಠವು ಕೇಂದ್ರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ