ಬೆಂಗಳೂರು,ಆ.23- ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ತುರ್ತು ನಡೆಸಲು ಸುಪ್ರಿಂಕೋರ್ಟ್ಗೆ ಮತ್ತೊಮ್ಮೆ ಮನವಿ ಮಾಡಿಕೊಳ್ಳುವುದಾಗಿ ವಕೀಲರು ತಿಳಿಸಿದ್ದಾರೆ.
ನವದೆಹಲಿಯಲ್ಲಿರುವ ಅನರ್ಹ ಶಾಸಕರೊಂದಿಗೆ ಮಾತುಕತೆ ನಡೆಸಿರುವ ಅವರ ಪರ ವಕೀಲರು, ಸೋಮವಾರ ಅಥವಾ ಮಂಗಳವಾರ ಸುಪ್ರೀಂಕೋರ್ಟ್ಗೆ ಅರ್ಜಿ ವಿಚಾರಣೆಯನ್ನು ತುರ್ತು ಕೈಗೆತ್ತಿಕೊಳ್ಳಲು ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ನಮ್ಮ ಪ್ರಕರಣವನ್ನು ತುರ್ತು ನಡೆಸಿ ಇತ್ಯರ್ಥಗೊಳಿಸುವಂತೆ ಅನರ್ಹ ಶಾಸಕರು ನಿನ್ನೆ ವಕೀಲರಾದ ಮುಕುಲ್ ರೊಹಟಗಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಸದರ್ಭದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ತುರ್ತು ವಿಚಾರಣೆ ನಡೆಸುವಂತೆ ಮತ್ತೊಮ್ಮೆ ಮನವಿ ಮಾಡಿಕೊಳ್ಳೋಣ ಎಂದು ಅನರ್ಹ ಶಾಸಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಈ ಹಿಂದೆ ತುರ್ತು ವಿಚಾರಣೆ ಕೈಗೆತ್ತಿಕೊಳ್ಳುವಂತೆ ಮಾಡಿದ ಮನವಿಯನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿರಲಿಲ್ಲ. ನ್ಯಾಯಾಧೀಶರಾದ ಅರುಣ್ಮಿಶ್ರಾ ಅವರು ರಿಜಿಸ್ಟ್ರಾರ್ ಅವರಿಗೆ ಅರ್ಜಿ ಸಲ್ಲಿಸಿ ಲಿಸ್ಟ್ ಪ್ರಕಾರ ವಿಚಾರಣೆ ಕೈಗೆತ್ತಿಕೊಳ್ಳೋಣ ಎಂದು ಹೇಳಿದ್ದರು.
ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆದಿರುವ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿರುವ ಅನರ್ಹ ಶಾಸಕರು ದೆಹಲಿಗೆ ತೆರಳಿ ವಕೀಲರನ್ನು ಭೇಟಿ ಮಾಡಿ ತುರ್ತು ವಿಚಾರಣೆ ನಡೆಸಿ ಪ್ರಕರಣ ಇತ್ಯರ್ಥಗೊಳಿಸಿ ಅನುಕೂಲ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಸೋಮವಾರ ಅಥವಾ ಮಂಗಳವಾರ ತುರ್ತು ವಿಚಾರಣೆಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ನ್ಯಾಯಾಲಯ ಯಾವ ರೀತಿ ಪರಿಗಣಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.