ಮಂಜುನಾಥ್ ಪ್ರಸಾದ್‍ರವರು ಮತ್ತೆ ಬಿಬಿಎಂಪಿ ಆಯುಕ್ತರಾಗಿ ನಿಯೋಜನೆಗೊಳ್ಳುವ ಸಾಧ್ಯತೆ

ಬೆಂಗಳೂರು, ಆ.23- ನಿನ್ನೆಯಷ್ಟೆ ಪಾಲಿಕೆಯಿಂದ ವರ್ಗಾವಣೆಗೊಂಡಿದ್ದ ಮಂಜುನಾಥ್ ಪ್ರಸಾದ್ ಅವರು ಮತ್ತೆ ಬಿಬಿಎಂಪಿ ಆಯುಕ್ತರಾಗಿ ನಿಯೋಜನೆಗೊಳ್ಳುವ ಸಾಧ್ಯತೆ ಇದೆ.

ಕಳೆದ ಮೂರುವರೆ ವರ್ಷಗಳಿಂದ ಅಧಿಕಾರದಲ್ಲಿದ್ದ ಮಂಜುನಾಥ್ ಪ್ರಸಾಧ್ ಅವರನ್ನು ವರ್ಗಾವಣೆ ಮಾಡಿ ನಗರಾಭಿವೃದ್ಧಿ ಇಲಾಖೆಯ ಅನಿಲ್ ಕುಮಾರ್ ಎಂಬ ಐಎಎಸ್ ಅಧಿಕಾರಿಯನ್ನು ಬಿಬಿಎಂಪಿ ಆಯುಕ್ತರನ್ನಾಗಿ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.

ಇಂದು ಹೊಸ ಆಯುಕ್ತರಾಗಿ ಅನಿಲ್‍ಕುಮಾರ್ ಅಧಿಕಾರ ವಹಿಸಿಕೊಳ್ಳಬೇಕಾಗಿತ್ತು. ಆದರೆ ಅವರು ಅಧಿಕಾರ ವಹಿಸಿಕೊಳ್ಳುವ ಯಾವುದೇ ಲಕ್ಷಣ ಕಂಡು ಬರುತ್ತಿಲ್ಲ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ಮುಂದಿನ ವಾರ ಅಧಿಕಾರ ವಹಿಸಿಕೊಳ್ಳಬಹುದು ಎಂದು ಸಬೂಬು ಹೇಳುತ್ತಿದ್ದಾರೆ.

ಪಾಲಿಕೆಗೆ ಯಾರೇ ಹೊಸದಾಗಿ ಬಂದರೂ ಮರುದಿನವೇ ಅಧಿಕಾರ ವಹಿಸಿಕೊಳ್ಳುತ್ತಾರೆ. ಇಂದು ಶುಕ್ರವಾರ ಗೋಕುಲಾಷ್ಟಮಿ ಕೂಡ ಇದೆ.ಅತ್ಯಂತ ಒಳ್ಳೆಯದಿನ. ಹಾಗಿದ್ದರು ಅನಿಲ್‍ಕುಮಾರ್ ಅವರು ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿಲ್ಲ.

ಪಕ್ಷಾತೀತವಾಗಿ ಕೆಲವು ರಾಜಕಾರಣಿಗಳು ಸರ್ಕಾರದ ಮೇಲೆ ಒತ್ತಡ ತಂದು ಮಂಜುನಾಥ್ ಪ್ರಸಾದ್ ಅವರನ್ನೇ ಆಯುಕ್ತರನ್ನಾಗಿ ಮುಂದುವರೆಸುವಂತೆ ಒತ್ತಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಮಂಜುನಾಥ್ ಪ್ರಸಾದ್ ಅವರೇ ಬಿಬಿಎಂಪಿ ಆಯುಕ್ತರಾಗಿ ಮುಂದುವರೆಯಲಿದ್ದಾರೆ ಎಂದು ತಿಳಿದು ಬಂದಿದೆ.

ಬಿಬಿಎಂಪಿಯಲ್ಲಿ ಮೂರು ವರ್ಷಕ್ಕಿಂತ ಹೆಚ್ಚು ಸಮಯ ಆಯುಕ್ತರಾಗಿ ಅಧಿಕಾರದಲ್ಲಿ ಇರುವುದಿಲ್ಲ. ಆದರೆ ಮಂಜುನಾಥ್ ಪ್ರಸಾದ್ ಅವರು ಇಲ್ಲಿಗೆ ಬಂದು ಮೂರುವರೆ ವರ್ಷವಾಗಿದೆ. ಒಂದು ವೇಳೆ ಅವರು ಆಯುಕ್ತರಾಗಿ ಮುಂದುವರೆದರೆ ಪಾಲಿಕೆಯಲ್ಲಿ ಅತಿಹೆಚ್ಚು ವರ್ಷ ಆಯುಕ್ತರಾಗಿದ್ದರೆಂಬ ಕೀರ್ತಿಗೆ ಭಾಜನರಾಗಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ