ಇಂದಿರಾ ಕ್ಯಾಂಟೀನ್ ಅವ್ಯವಹಾರ ಕೂಡ ಸಿಬಿಐ ತನಿಖೆಗೆ?

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದೆ ತಡ ಬಿಬಿಎಂಪಿ ಬಜೆಟ್, ವೈಟ್ ಟ್ಯಾಪಿಂಗ್ ಮತ್ತು ಟೆಂಡರ್ ಶ್ಯೂರ್ ಕಾಮಗಾರಿಗಳ ತನಿಖೆಗೆ ಒಪ್ಪಿಸಲಾಗಿದೆ. ಈಗ ಇಂದಿರಾ ಕ್ಯಾಂಟೀನ್ ಸರದಿ ಎಂಬ ಮಾತು ಹರಿದಾಡುತ್ತಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಗರಣ ಆರೋಪವಿರುವ ಎಲ್ಲ ಯೋಜನೆಗಳನ್ನ ತನಿಖೆಗೆ ಒಪ್ಪಿಸುತ್ತಿದ್ದಾರೆ. ಈ ಸಾಲಿಗೆ ಇಂದಿರಾ ಕ್ಯಾಂಟೀನ್ ಸಹ ಶೀಘ್ರವೇ ಸೇರ್ಪಡೆಯಾಗುವ ಸಾಧ್ಯತೆ ಇದೆ. ಇಂದಿರಾ ಕ್ಯಾಂಟೀನ್ ಬಡವರ ಹೊಟ್ಟೆ ತುಂಬಿಸುವುದರ ಬದಲು ಉಳ್ಳವರ ಖಜಾನೆ ತುಂಬಿಸಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆದರಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಪರಮೇಶ್ವರ್ ಹಾಗೂ ಮಾಜಿ ಸಚಿವ ಕೆ.ಜೆ ಜಾರ್ಜ್ ಯೋಜನೆ ಹೆಸರಲ್ಲಿ ಕೋಟಿ ಲೂಟಿ ಹೊಡೆದಿದ್ದಾರೆ ಎಂಬ ಆರೋಪವಿದೆ.

ವಿಪಕ್ಷ ಕಾಂಗ್ರೆಸ್ ನಾಯಕರು ಅವರ ಅಧಿಕಾರದಲ್ಲಿದ್ದಾಗ ನಡೆದಿದೆ ಎನ್ನಲಾದ ಅಕ್ರಮವನ್ನು ತನಿಖೆಗೆ ಒಳಪಡಿಸುವ ಮೂಲಕ ರಾಜಕೀಯವಾಗಿ ಕಟ್ಟಿಹಾಕುವ ಪ್ಲ್ಯಾನ್ ನಡೆಯುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 189 ಇಂದಿರಾ ಕ್ಯಾಂಟೀನ್‍ನಲ್ಲಿ ಒಂದಕ್ಕೆ ಹತ್ತು ಪಟ್ಟು ಅಂಕಿ ಅಂಶ ತೋರಿಸಿ ಕೋಟ್ಯಂತರ ರೂಪಾಯಿಯ ಸಬ್ಸಿಡಿ ಹಣದ ಹಗಲು ದರೋಡೆ ಬಗ್ಗೆ ರಾಜ್ಯ ಸರ್ಕಾರ ತನಿಖೆಗೆ ಚರ್ಚಿಸುತ್ತಿದೆ. ಉನ್ನತ ಮಟ್ಟದ ಅಥವಾ ಸಿಐಡಿ ತನಿಖೆ ನಡೆಸುವ ಬಗ್ಗೆ ಬೆಂಗಳೂರು ನಗರ ಬಿಜೆಪಿ ವಕ್ತಾರ ಎನ್.ಆರ್. ರಮೇಶ್ ಅವರ ದೂರು ಸೇರಿದಂತೆ ಸಾರ್ವಜನಿಕವಾಗಿ ಸಾಕಷ್ಟು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನಿಖೆಗೆ ಮುಂದಾಗುವ ಸಂಭವ ಇದೆ.

ಗೋಲ್ ಮಾಲ್ ಮಾಹಿತಿ
* ಮಾಜಿ ಸಿಎಂ ಸಿದ್ದರಾಮಯ್ಯ 2017 ರಲ್ಲಿ 198 ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಸರ್ಕಾರ ಆದೇಶ ನೀಡಲಾಗಿತ್ತು.
* ತಮಿಳುನಾಡು ಮೂಲದ ಎಂ/ಎಸ್ ಇನ್‍ಪ್ರಸ್ಟ್ರಕ್ಚರ್ ಫ್ರೈ ಲಿಮಿಟೆಡ್‍ಗೆ ಕ್ಯಾಂಟೀನ್ ನಿರ್ಮಾಣ ಗುತ್ತಿಗೆ
* ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣಕ್ಕೆ ಒಟ್ಟು 72 ಕೋಟಿ 90 ಲಕ್ಷ ವೆಚ್ಚ
* ಪ್ರತಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ತಲಾ 28.50 ಲಕ್ಷ
* 198 ಕ್ಯಾಂಟೀನ್‍ಗೆ ಒಟ್ಟು 56.3 ಕೋಟಿ ವೆಚ್ಚ
* ಅಡುಗೆ ಮನೆ ನಿರ್ಮಾಣಕ್ಕೆ 16.47 ಕೋಟಿ.
* ಕ್ಯಾಂಟೀನ್, ಅಡುಗೆ ಮನೆ ಅಗತ್ಯ ಸಲಕರಣೆಗಳಿಗೆ 14 ಕೋಟಿ 53 ಲಕ್ಷ ಬಿಡುಗಡೆ
* 900 ಚ.ಅಡಿ ವಿಸ್ತೀರ್ಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ