ಮಾಜಿ ಪಿ.ಎಂ ದೇವೆಗೌಡರಿಂದ ಕಾಂಗ್ರೆಸ್‍ನವರ ವಿರುದ್ಧ ವಾಗ್ದಾಳಿ

ಬೆಂಗಳೂರು, ಆ.23- ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು, ಕಾಂಗ್ರೆಸ್‍ನವರ ಹಿಂಸೆ ತಾಳಲಾರದೆ ರಾಜೀನಾಮೆ ಕೊಡಲು ಮುಂದಾಗಿದ್ದರು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರು ಕೊಟ್ಟ ಹಿಂಸೆಯನ್ನು ತಾಳಲಾರದೆ ನನ್ನ ಬಳಿ ಬಂದು ಕಣ್ಣೀರು ಹಾಕಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಹೇಳಿದ್ದರೂ ಆಗ ಸಮಾಧಾನಪಡಿಸಿ ಮುಂದುವರೆಯುವಂತೆ ಸಲಹೆ ಮಾಡಿದ್ದಾಗಿ ಹೇಳಿದರು.

ಕಾಂಗ್ರೆಸ್‍ನವರು ಕೊಡುತ್ತಿದ್ದ ನೋವವನ್ನು ನಿತ್ಯ ಸಹಿಸಿಕೊಂಡು ಊಟ ಮಾಡುತ್ತಿದ್ದೆ. ಒಂದು ವೇಳೆ ನಾವೇ ಸರ್ಕಾರ ತೆಗೆದಿದ್ದರೆ, ದೇವೇಗೌಡರು ಸರ್ಕಾರ ತೆಗೆದರು ಎಂಬ ಆರೋಪ ಬರುತ್ತಿತ್ತು. ಅದಕ್ಕಾಗಿ ಕಾಂಗ್ರೆಸ್‍ನವರ ಎಲ್ಲ ನೋವು ಸಹಿಸಿಕೊಂಡಿದ್ದೇವೆ ಎಂದು ಕಾಂಗ್ರೆಸ್‍ನವರ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‍ನವರೆ ಮೈತ್ರಿ ಸರ್ಕಾರವನ್ನು ತೆಗೆದರು. ಹೀಗಾಗಿ ಸರ್ಕಾರ ಪತನವಾದ ಮೇಲೆ ಎಲ್ಲ ವಿಚಾರಗಳನ್ನು ಬಹಿರಂಗಪಡಿಸಲಾಗುತ್ತಿದೆ. ಪ್ರಾದೇಶಿಕ ಪಕ್ಷವಾಗಿ ಸರ್ಕಾರದಿಂದ ನಾವೇ ಹೊರಬಂದಿದ್ದರೇ ದೇಶದಲ್ಲಿ ತಪ್ಪು ಸಂದೇಶ ರವಾನೆಯಾಗುತ್ತಿತ್ತು. ಹೀಗಾಗಿ ನೋವು ಸಹಿಸಿಕೊಂಡು ಹೋಗುವಂತೆ ಕುಮಾರಸ್ವಾಮಿ ಅವರಿಗೆ ಸಲಹೆ ಮಾಡಿದ್ದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ