ಬೆಂಗಳೂರು, ಆ.23-ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಕಳೆದ ಸೋಮವಾರದಿಂದ ಇಂದಿನವರೆಗೆ ಹದಿಮೂರು ಜಿಲ್ಲೆಗಳ ಜೆಡಿಎಸ್ ಮುಖಂಡರ ಸಭೆಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನಡೆಸಿದ್ದಾರೆ.
ಪ್ರಸ್ತುತ ರಾಜಕೀಯ ಪರಿಸ್ಥಿತಿ, ಪಕ್ಷ ಸಂಘಟನೆ, ಮುಂಬರುವ ಚುನಾವಣೆಗಳಿಗೆ ಸಿದ್ಧತೆ, ಜಿಲ್ಲಾಮಟ್ಟದ ಪದಾಧಿಕಾರಿಗಳ ನೇಮಕ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಗೌಡರು ಜಿಲ್ಲಾವಾರು ಸಭೆ ನಡೆಸಿ ಮಾರ್ಗದರ್ಶನ ಮಾಡಿದ್ದಾರೆ.
ಆಯಾಯ ಜಿಲ್ಲೆಯ ಅಧ್ಯಕ್ಷರು, ಪದಾಧಿಕಾರಿಗಳು, ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು, ಶಾಸಕರು, ಮಾಜಿ ಸಚಿವರು ಸೇರಿದಂತೆ ಜಿಲ್ಲೆಗೆ ಸಂಬಂಧಪಟ್ಟ ಪಕ್ಷದ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಮೈತ್ರಿ ಸರ್ಕಾರದ ಪತನ ಅದಕ್ಕೆ ಕಾರಣವಾದ ಸನ್ನಿವೇಶಗಳು ಮುಂದೆ ಪಕ್ಷ ಸಂಘಟನೆಗೆ ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ಗೌಡರು ಸಲಹೆ ಮಾಡಿದ್ದಾರೆ.
ಜಿಲ್ಲಾಮಟ್ಟದಲ್ಲಿ ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಸ್ಥಳೀಯರಿಂದ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ.
ಅಗತ್ಯವಿರುವ ಕಡೆಗಳಲ್ಲಿ ಪದಾಧಿಕಾರಿಗಳ ಬದಲಾವಣೆಗೂ ತೀರ್ಮಾನಿಸಲಾಗಿದೆ ಒಟ್ಟಾರೆ ಸರ್ಕಾರ ಪತನ ಹಾಗೂ ಲೋಕಸಭೆ ಚುನಾವಣೆ ಹಿನ್ನಡೆಯಿಂದ ಕಾರ್ಯಕರ್ತರು ದೃತಿಗೆಡದೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕೆಂಬ ಸಂದೇಶವನ್ನು ನೀಡಲಾಗಿದೆ.
ಆ. 19 ಚಿಕ್ಕಬಳ್ಳಾಪುರ, ಕೋಲಾರ, ಆ. 20ರಂದು ಮಂಡ್ಯ, ರಾಮನಗರ, ಆ. 21 ಚಾಮರಾಜನಗರ, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಪಕ್ಷದ ಮುಖಂಡರ ಸಭೆ ನಡೆಸಿದ್ದಾರೆ.
ನಿನ್ನೆ ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳ ಸಭೆ ನಡೆಸಿದ್ದು, ಇಂದು ಬಳ್ಳಾರಿ, ಕೊಪ್ಪಳ, ಬೀದರ ಜಿಲ್ಲೆಗಳ ಸಭೆ ನಡೆಸಿ ಸಲಹೆ, ಮಾರ್ಗದರ್ಶನವನ್ನು ಗೌಡರು ನೀಡಿದ್ದಾರೆ.