ಬೆಂಗಳೂರು, ಆ.22- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರೇ ಪತನಗೊಳಿಸಿದರು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಆರೋಪಿಸಿದ್ದಾರೆ.
ಜೆಪಿ ಭವನದಲ್ಲಿಂದು ನಡೆದ ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಪದಾಧಿಕಾರಿಗಳು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು ಮುಂಬೈಗೆ ತೆರಳಿದ್ದ ಸಿದ್ದರಾಮಯ್ಯ ಅವರ ಬೆಂಬಲಿಗರಿಂದ ಮೈತ್ರಿ ಸರ್ಕಾರ ಪತನವಾಯಿತು. ಅವರ ಹಿಂದೆ ಯಾರಿದ್ದಾರೆ ಎಂಬುದನ್ನು ಊಹಿಸಬಹುದು. ಮುಂಬೈಗೆ ಹೋದವರೆ ಹೇಳಿದ್ದಾರೆ. ಸರ್ಕಾರವನ್ನು ಪತನಗೊಳಿಸಲು ನಮ್ಮ ಪಕ್ಷದ ಮುಖಂಡರೇ ತಿಳಿಸಿದ್ದಾರೆ ಎಂದು ಯಾವುದೂ ರಹಸ್ಯವಾಗಿ ಉಳಿದಿಲ್ಲ.
ಕಾಂಗ್ರೆಸ್, ಬಿಜೆಪಿ ರಾಷ್ಟ್ರೀಯ ಪಕ್ಷಗಳ ನಡುವೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ಅನ್ನು ಸಂಘಟನೆ ಮಾಡಲು ಎಲ್ಲರೂ ಸಹಕಾರ ನೀಡಬೇಕು.
ಕಳೆದ ಲೋಕಸಭೆ ಚುನಾವಣೆಯ ಹಿನ್ನಡೆಗೆ ಮೈತ್ರಿ ಸರ್ಕಾರವೇ ಕಾರಣ ಎಂಬ ರೀತಿಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಮಾತನಾಡಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ತಾವು ಸೋಲಲು ಕಾರಣ ಯಾರೆಂಬುದು ಗೊತ್ತಿದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಜೆಡಿಎಸ್ ಎಂಟು ಶಾಸಕರನ್ನು ಕರೆದುಕೊಂಡು ನಮ್ಮ ಪಕ್ಷವನ್ನು ದುರ್ಬಲಗೊಳಿಸಲು ಯತ್ನಿಸಿರುವ ವಿಚಾರವೂ ಗೊತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಮಾಜಿ ಸಚಿವ ಎನ್.ಎಂ.ನಭಿ, ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯಶೋಧರ್ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಘಟಕಗಳ ಮುಖಂಡರು, ಪದಾಧಿಕಾರಿಗಳು ಹಾಜರಿದ್ದರು.