ಬೆಂಗಳೂರು, ಆ.22- ನಿಯಮಾವಳಿ ಮೀರಿ ಬಿಬಿಎಂಪಿಗೆ ಜಂಟಿ ಆಯುಕ್ತ ಮತ್ತು ಉಪ ಆಯುಕ್ತರನ್ನು ನಿಯೋಜಿಸಿರುವ ಪಾಲಿಕೆ ಕ್ರಮಕ್ಕೆ ಹೈಕೋರ್ಟ್, ಸರ್ಕಾರ ಮತ್ತು ಆಯುಕ್ತರಿಗೆ ನೋಟೀಸ್ ಜಾರಿ ಮಾಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವೃಂದ ಮತ್ತು ನೇಮಕಾತಿ ನಿಯಮಾವಳಿ ವಿರುದ್ಧ ಪಾಲಿಕೆಗೆ ಜಂಟಿ ಆಯುಕ್ತರು ಮತ್ತು ಉಪ ಆಯುಕ್ತರನ್ನು ನಿಯೋಜನೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್ರಾಜ್ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಪಾಲಿಕೆಗೆ ನಿಯೋಜನೆಗೊಂಡಿರುವ ಕೆಲವು ಜಂಟಿ ಮತ್ತು ಉಪ ಆಯುಕ್ತರು ಕೆಎಎಸ್ ದರ್ಜೆಯವರಲ್ಲ. ಆದರೂ ಅವರನ್ನು ನಿಯೋಜಿಸಲಾಗುತ್ತಿರುವುದರಿಂದ ಅನ್ಯಾಯವಾಗುತ್ತಿದೆ ಎಂದು ಅಮೃತ್ರಾಜ್ ಅರ್ಜಿಯಲ್ಲಿ ವಾದಿಸಿದ್ದರು.
ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿರುವ ನ್ಯಾಯಾಲಯ ಕರ್ನಾಟಕ ಸರ್ಕಾರ ಮತ್ತು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ನೋಟೀಸ್ ಜಾರಿ ಮಾಡಿದೆ.