ಬೆಂಗಳೂರು, ಆ.22-ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜಯಂತಿ ಈ ಬಾರಿ ನಡೆಯುವುದೇ ಎಂಬ ಅನುಮಾನ ಮೂಡಿದೆ.
ಏಪ್ರಿಲ್ ತಿಂಗಳಿನಲ್ಲಿ ನಡೆಯಬೇಕಿದ್ದ ಕೆಂಪೇಗೌಡ ಜಯಂತಿಗೆ ಆಗಸ್ಟ್ ಮುಗಿಯುತ್ತಾ ಬಂದರೂ ಮುಹೂರ್ತ ಕೂಡಿಬಂದಿಲ್ಲದಿರುವುದು ವಿಪರ್ಯಾಸದ ಸಂಗತಿ.
ಬಿಬಿಎಂಪಿ ಮೇಯರ್ ಅವಧಿ ಕೂಡ ಮುಗಿಯುತ್ತಾ ಬಂದಿದೆ. ಆದರೂ ಕೆಂಪೇಗೌಡ ಜಯಂತಿ ಬಗ್ಗೆ ಪಾಲಿಕೆ ಯಾವುದೇ ರೂಪುರೇಷೆ ಸಿದ್ಧಪಡಿಸಿದಂತಿಲ್ಲ.
ಲೋಕಸಭಾ ಚುನಾವಣೆ, ಸರ್ಕಾರ ಪತನದ ನೆಪವೊಡ್ಡಿ ಕೆಂಪೇಗೌಡ ದಿನಾಚರಣೆಯನ್ನು ಬಿಬಿಎಂಪಿ ಮರೆತಂತೆ ಕಾಣುತ್ತಿದೆ. ಇದೀಗ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ.ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯೂ ಆಗಿದ್ದಾರೆ. ಸಚಿವ ಸಂಪುಟ ರಚನೆಯಾಗಿದೆ.ಈ ಸರ್ಕಾರವಾದರೂ ಕೆಂಪೇಗೌಡ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ನಾಡಪ್ರಭುವಿಗೆ ಗೌರವ ಸಲ್ಲಿಸುವ ಅಗತ್ಯವಿದೆ.
ಆದರೆ ರಾಜಕೀಯ ದೊಂಬರಾಟ ಇನ್ನೂ ನಿಂತಿಲ್ಲ. ಹಾಗಾಗಿ ನಾಡಪ್ರಭುವನ್ನೇ ನಮ್ಮ ಜನಪ್ರತಿನಿಧಿಗಳು ಮರೆತಂತೆ ಕಾಣುತ್ತಿದೆ. ಸಂವಿಧಾನ ರಚಿಸಿಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ಅವರ ಜಯಂತಿಯನ್ನೂ ಸರಿಯಾಗಿ ಆಚರಿಸದೆ ಕಡೆಗಣನೆ ಮಾಡಲಾಗಿದೆ ಎಂದು ಸಾರ್ವಜನಿಕರು ಬಿಬಿಎಂಪಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.