ನವದೆಹಲಿ, ಆ.22- ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಬಂಧನದ ಹಿಂದೆ ಶೀನಾಬೋರಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಅವರ ಹೇಳಿಕೆಯೇ ಪ್ರಮುಖ ಕಾರಣ ಎನ್ನಲಾಗಿದೆ.
ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ಮತ್ತು ಇಡಿ ತನಿಖಾ ಅಧಿಕಾರಿಗಳ ಮುಂದೆ ಇಂದ್ರಾಣಿ ಮುಖರ್ಜಿ ನೀಡಿದ್ದ ಹೇಳಿಕೆಯೇ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಬಂಧನಕ್ಕೆ ಪ್ರಮುಖ ಅಸ್ತ್ರ, ಆಧಾರ, ಸಾಕ್ಷಿಯಾಯಿತು ಎನ್ನಲಾಗಿದೆ.
ಇಂದ್ರಾಣಿ ಮುಖರ್ಜಿ ಮತ್ತು ಅವರ ಪತಿ ಪೀಟರ್ ಮುಖರ್ಜಿ ಅವರು ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ನೀಡಿದ್ದ ಹೇಳಿಕೆಯಲ್ಲಿ ಆಗಿನ ಹಣಕಾಸು ಸಚಿವ ಚಿದಂಬರಂ ಅವರನ್ನು ತಮ್ಮ ಉತ್ತರ ಬ್ಲಾಕ್ ಕಚೇರಿಯಲ್ಲಿ ಭೇಟಿಯಾಗಿದ್ದಾಗಿಯೂ ನಂತರ ಅವರ ಪುತ್ರ ಕಾರ್ತಿ ಅವರನ್ನು ಭೇಟಿಯಾಗಿ ವ್ಯವಹಾರದಲ್ಲಿ ಸಹಾಯ ಮಾಡುವಂತೆ ಮನವಿ ಮಾಡಿದ್ದ ವಿಷಯ ತಿಳಿಸಿದ್ದರು. ಇದು ಚಿದು ಬಂಧನಕ್ಕೆ ಪುಷ್ಟಿ ಕೊಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪುತ್ರ ಕಾರ್ತಿಯವರನ್ನು ಬಂಧಿಸಿ ನಂತರ ಬಿಡಗಡೆ ಮಾಡಲಾಗಿದೆ.
ಇಂದ್ರಾಣಿ ಮಾಫಿ ಸಾಕ್ಷಿ: ಪ್ರಕರಣದಲ್ಲಿ ಮಾಫಿಸಾಕ್ಷಿ ಆಗಲು ಇಂದ್ರಾಣಿ ಮುಖರ್ಜಿಗೆ ದೆಹಲಿ ಕೋರ್ಟ್ ಕಳೆದ ತಿಂಗಳು ಅನುಮತಿ ನೀಡಿತ್ತು. ಮಾಫಿಸಾಕ್ಷಿ ಆಗಿ, ಪ್ರಕರಣದ ಸಂಪೂರ್ಣ ಮಾಹಿತಿ ನೀಡಿದರೆ ತಮಗೆ ಕ್ಷಮಾದಾನ ನೀಡುವಂತೆ ಕೋರ್ಟ್ಗೆ ಇಂದ್ರಾಣಿ ಮನವಿ ಮಾಡಿದ್ದರು.