ಬೆಂಗಳೂರು, ಆ.22- ಹೊರಗುತ್ತಿಗೆ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕಾರ್ಮಿಕ ಇಲಾಖೆಯ ನಿರ್ದೇಶನದ ಅನುಸಾರ ವೇತನ ಹಾಗೂ ಸೌಲಭ್ಯ ನೀಡದಿರುವ ಗಂಭೀರವಾದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಾರ್ಮಿಕ ಇಲಾಖೆ ಎಚ್ಚರಿಸಿದೆ.
ಇಲಾಖೆಯ ಕಾರ್ಯದರ್ಶಿ ಮಣಿವಣ್ಣನ್ ಅವರು, ಸುತ್ತೋಲೆಯನ್ನು ಹೊರಡಿಸಿದ್ದು, 2017ರ ಡಿಸೆಂಬರ್ 29ರ ಸರ್ಕಾರದ ಸುತ್ತೋಲೆಯ ಅನುಸಾರ ವಿವಿಧ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಕನಿಷ್ಠ ವೇತನ ನೀಡುವಂತೆ ಸೂಚನೆ ನೀಡಿದ್ದಾರೆ.
2017ರ ಸುತ್ತೋಲೆಯ ಪ್ರಕಾರ ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ದ್ವಿತೀಯದರ್ಜೆ ಸಹಾಯಕರುಗಳಿಗೆ, ಸಿನಿಮಾ ಉದ್ಯಮಗಳಲ್ಲಿ ನಿಗದಿಪಡಿಸಿರುವ ಕನಿಷ್ಟ ವೇತನದರಗಳನ್ನು ಡಿ ಗ್ರೂಪ್ ಹುದ್ದೆ ನೌಕರರಿಗೆ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಯ ಉದ್ಯಮಗಳಲ್ಲಿ ನಿಗದಿಪಡಿಸಿದ ಕನಿಷ್ಟದರಗಳನ್ನು ದಿನಗೂಲಿ ವೇತನವನ್ನು ಮತ್ತು ಜೀವನ ನಿರ್ವಹಣೆ ಭತ್ಯೆಯನ್ನು ನೀಡಬೇಕೆಂದು ಸೂಚನೆ ನೀಡಲಾಗಿದೆ.
ಸರ್ಕಾರಿ ಸ್ವಾಮ್ಯದ ನಿಗಮಗಳು, ಮಂಡಳಿಗಳು, ವಿಶ್ವವಿದ್ಯಾಲಯಗಳು, ಶಾಲೆಗಳು, ಸ್ಥಳೀಯ ಸಂಸ್ಥೆಗಳು, ಶಾಸನಬದ್ಧ ಸಂಸ್ಥೆಗಳು, ಸೊಸೈಟಿಗಳು, ಪರಿಷತ್ಗಳು ಸೇರಿದಂತೆ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸಮಾಡುತ್ತಿರುವ ಸಿಬ್ಬಂದಿಗಳಿಗೆ ವೇತನವನ್ನು ಪರಿಷ್ಕರಿಸಲಾಗಿತ್ತು.
ಅದರ ಪ್ರಕಾರ ಭದ್ರತಾ ಏಜೆನ್ಸಿಗಳು 2016 ಫೆ. 29ರಂದು ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನ ದರದಂತೆ, ಮಾನವ ಸಂಪನ್ಮೂಲ ಏಜೆನ್ಸಿಗಳಿಂದ ನೇಮಿಸಿಕೊಂಡ ಸಿಬ್ಬಂದಿಗಳಿಗೆ ಹಾಗೂ ಪಂಚಾಯತ್ ರಾಜ್ ಸಂಸ್ಥೆ 2016ರ ಆ. 5ರಂದು ಹೊರಡಿಸಿರುವ ಅಧಿಸೂಚನೆಯಂತೆ, ಒಳಚರಂಡಿ, ಸ್ನಾನಗೃಹ, ಶೌಚಾಲಯ ಸ್ವಚ್ಛಗೊಳಿಸುವವರಿಗೆ ಖಾಸಗಿ ಸಫಾಯಿ ಕರ್ಮಚಾರಿ ನಿಯಮಗಳಂತೆ ವೇತನ ನಿಗದಿ ಪಡಿಸಬೇಕೆಂದು ತಿಳಿಸಲಾಗಿತ್ತು. ಕೆಲಸದ ಸ್ವರೂಪದ ಬಗ್ಗೆ ಸ್ಪಷ್ಟತೆ ಇರದಿದ್ದರೆ ಅಧಿಕಾರಿಗಳ ಸಮಿತಿಯೊಂದನ್ನು ರಚಿಸಿ ಯಾವ ಕೆಲಸಕ್ಕೆ ಸಮಾನವಾಗಿದೆ ಎಂದು ಅಧ್ಯಯನ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಿಳಿಸಲಾಗಿತ್ತು.
ವಿರಾಮ ಒಳಗೊಂಡಂತೆ ದಿನಕ್ಕೆ 8ಗಂಟೆ ಕೆಲಸಕ್ಕೆ ವೇತನ ಲೆಕ್ಕ ಹಾಕಬೇಕು, 8ಗಂಟೆ ಮೇಲ್ಪಟ್ಟು ಕೆಲಸ ಮಾಡಿದರೆ ಪ್ರತಿ ಗಂಟೆಗೆ ಸರಾಸರಿ ವೇತನದ ದುಪ್ಪಟ್ಟನ್ನು ಲೆಕ್ಕ ಹಾಕಿ ಕೊಡಬೇಕು.ನಾಲ್ಕು ದಿನ ವೇತನ ಸಹಿತ ರಜೆ ನೀಡಬೇಕು, ತಿಂಗಳಿಗೆ 26ದಿನಕ್ಕಿಂತ ಕಡಿಮೆ ಕೆಲಸ ಮಾಡಿದರೆ ವೇತನ ಕಡಿತ ಮಾಡಿಕೊಳ್ಳಬೇಕು.
ರಜಾದಿನಗಳಲ್ಲೂ ಕೆಲಸ ಮಾಡಲು ಇಚ್ಛಿಸಿದರೆ ದುಪ್ಪಟ್ಟು ವೇತನ ನೀಡಬೇಕು ಎಂದು ವಿವರಣೆ ನೀಡಲಾಗಿದೆ.
ನೌಕರರ ಭಾಗದ ಇಎಸ್ಐ, ಪಿಎಫ್ ಹಣವನ್ನು ಕಟಾವು ಮಾಡಿ ಉದ್ಯೋಗದಾತರು ತಮ್ಮ ಪಾಲಿನ ವಂತಿಗೆಯನ್ನು ಸೇರಿಸಿ ಸಂಬಂಧಿಸಿದ ಸಂಸ್ಥೆಗೆ ಪಾವತಿ ಮಾಡಬೇಕು. ಪ್ರತಿ ತಿಂಗಳು ಐದನೇ ತಾರೀಖಿನೊಳಗೆ ವೇತನ ನೀಡಬೇಕು, ಕ್ರಮಬದ್ಧವಲ್ಲದ ಯಾವುದೇ ಕಟಾವಣೆಗಳನ್ನು ಮಾಡಬಾರದೆಂದು 2017ರ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಆದರೆ ಅದರಂತೆ ವೇತನ ನೀಡದಿರುವುದು, ಸರ್ಕಾರದ ಗಮನಕ್ಕೆ ಬಂದಿದೆ ಎಂದು ಮಣಿವಣ್ಣನ್ ಹೇಳಿದ್ದು, ಉದ್ಯೋಗದಾತರು ಸುತ್ತೋಲೆ ಅಂಶವನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು.ಇಲ್ಲವಾದರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.