ಬೆಂಗಳೂರು, ಆ.22-ನಗರದಲ್ಲಿ ನಕ್ಷೆ ಉಲ್ಲಂಘಿಸಿ ಹಲವಾರು ಕಟ್ಟಡಗಳನ್ನು ಕಟ್ಟಿರುವುದರಿಂದ ಸಾಕಷ್ಟು ಅನಾಹುತಗಳು ಸಂಭವಿಸಿದ್ದರೂ, ಅಕ್ರಮ ಕಟ್ಟಡಗಳು ತಲೆ ಎತ್ತುವುದಂತೂ ನಿಂತಿಲ್ಲ. ಇದಕ್ಕೊಂದು ಸ್ಪಷ್ಟ ಉದಾಹರಣೆ ಇಲ್ಲಿದೆ.
ವಸಂತ ನಗರ ವಾರ್ಡ್ ಬಿಡಿಎ ಕಚೇರಿ ಸಮೀಪದಲ್ಲೇ ಜಗದೀಶ್ ಅಡ್ವಟೈಸರ್ಸ್ ಸಂಸ್ಥೆಯವರು 8 ಅಂತಸ್ತಿನ ಕಟ್ಟಡವನ್ನು ಕಟ್ಟಿದ್ದಾರೆ. ಪಾಲಿಕೆಯಿಂದ ಕೇವಲ ನೆಲಮಹಡಿ ಮತ್ತು 2 ಅಂತಸ್ತಿನ ಕಟ್ಟಡ ಕಟ್ಟಲು ಅನುಮತಿ ಪಡೆದು ಭಾರೀ ಕಟ್ಟಡ ನಿರ್ಮಿಸಿದ್ದಾರೆ.
ಈ ಕಟ್ಟಡ ಮುಖ್ಯಮಂತ್ರಿಗಳ ಗೃಹ ಕಚೇರಿಗೆ ಕೂಗಳತೆ ದೂರದಲ್ಲಿದೆ. ಆದರೂ ಈ ಅಕ್ರಮ ಕಟ್ಟಡ ಸ್ಥಗಿತಗೊಳಿಸಲು ಯಾರಿಂದಲೂ ಸಾಧ್ಯವಾಗಿಲ್ಲ.
ಈ ಅಕ್ರಮ ಕಟ್ಟಡಕ್ಕೆ ತಡೆಯೊಡ್ಡಬೇಕೆಂದು ಜೆಡಿಎಸ್ ಗುಂಪಿನ ನಾಯಕಿ ನೇತ್ರಾನಾರಾಯಣ್ ಪಾಲಿಕೆ ಆಯುಕ್ತರಿಗೆ ದೂರು ನೀಡಿದ್ದರು. ಅವರ ದೂರಿನ ಆಧಾರದ ಮೇಲೆ ಕ್ರಮ ಕೈಗೊಳ್ಳುವಂತೆ ಆಯುಕ್ತರು ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದ್ದರು.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕಾರ್ಯಪಾಲಕ ಅಭಿಯಂತರರು ಕೂಡಲೇ ಕಟ್ಟಡದ ಕಾಮಗಾರಿ ನಿಲ್ಲಿಸುವಂತೆ ಕಟ್ಟಡ ಮಾಲೀಕರಿಗೆ ನೋಟೀಸ್ ನೀಡಿದ್ದರು. ಆದರೂ ಇದಕ್ಕೆ ಕವಡೆ ಕಾಸಿನ ಕಿಮ್ಮತ್ತನ್ನು ಮಾಲೀಕರು ನೀಡಲಿಲ್ಲ. ಹಾಗಾಗಿ 462ರ ಅನ್ವಯ ಮತ್ತೆ ನೋಟೀಸ್ ನೀಡಿ ಅಕ್ರಮವಾಗಿ ಕಟ್ಟಡ ಕಟ್ಟುತ್ತಿರುವುದರಿಂದ ನಾವು ಇದನ್ನು ಕೆಡವುತ್ತೇವೆ. ಇದಕ್ಕೆ ತಗಲುವ ವೆಚ್ಚವನ್ನು ನೀವೇ ಭರಿಸಬೇಕೆಂದು ಸೂಚಿಸಿದ್ದರು.ಇದಕ್ಕೂ ಮಾಲೀಕರು ಬಗ್ಗಿಲ್ಲ.
ಕೆಲವು ಕಾಣದ ಕೈಗಳು ಮತ್ತು ಕೆಲ ಜನಪ್ರತಿನಿಧಿಗಳು ಆ ಕಟ್ಟಡದ ಮಾಲೀಕರ ಪರ ನಿಂತಿರುವುದರಿಂದಲೇ ಬಿಬಿಎಂಪಿಗೆ ಕಟ್ಟಡ ಕೆಡವಲು ಇದುವರೆಗೂ ಸಾಧ್ಯವಾಗಿಲ್ಲ.
ಕೂಡಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇತ್ತ ಗಮನ ಹರಿಸಿ ಈ ಅಕ್ರಮ ಕಟ್ಟಡವನ್ನು ನೆಲಸಮಗೊಳಿಸಲು ಆದೇಶ ನೀಡಬೇಕು. ಈ ಮೂಲಕ ಮುಂದೆ ನಗರದಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತದಂತೆ ನೋಡಿಕೊಳ್ಳಬೇಕು ಎಂದು ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಅಮರೇಶ್ ಒತ್ತಾಯಿಸಿದ್ದಾರೆ.