ರಸಗೊಬ್ಬರ ಮಾರಾಟ ಮತ್ತು ವಿತರಣೆಗೆ ಪರವಾನಗಿ ಪಡೆಯಲು ಕೃಷಿ ಪದವೀಧರರಿರಬೇಕು

ಬೆಂಗಳೂರು, ಆ.22- ರಸಗೊಬ್ಬರ ಮಾರಾಟ ಮತ್ತು ವಿತರಣೆಗೆ ಪರವಾನಗಿ ಪಡೆಯಲು ಅಥವಾ ಪರವಾನಗಿಯನ್ನು ನವೀಕರಿಸಲು ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಂಘ ಹಾಗೂ ಗ್ರಾಮ ಮಟ್ಟದ ಸಹಕಾರಿ ಸಂಘಗಳಲ್ಲಿ ಕೃಷಿ ಪದವೀಧರರು ಇರಬೇಕೆಂಬ ನಿಯಮವನ್ನು ಸಡಿಲಿಸಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಅಧ್ಯಕ್ಷ ಡಾ ಎಂ. ಎನ್. ರಾಜೇಂದ್ರ ಕುಮಾರ್ ಮನವಿ ಮಾಡಿದ್ದಾರೆ.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿರುವ ಅವರು, ಈ ಎರಡೂ ಸಂಘಗಳಲ್ಲಿ ಕೃಷಿ ಪದವೀಧರರು ಇಲ್ಲದಿರುವ ಹಿನ್ನೆಲೆಯಲ್ಲಿ ರಸಗೊಬ್ಬರ ಮಾರಾಟ ಮತ್ತು ವಿತರಣೆಗೆ ಹಲವಾರು ಸಂಘಗಳಿಗೆ ಅವಕಾಶ ದೊರೆಯದೇ ಸಂಘಗಳು ರಸಗೊಬ್ಬರ ಮಾರಾಟದ ತಮ್ಮ ಪ್ರಮುಖ ವ್ಯವಹಾರದಿಂದಲೇ ವಿಮುಖವಾಗುವ ಪರಿಸ್ಥಿತಿ ತಲುಪಿದೆ. ಆದಕಾರಣ, ಈ ನಿಯಮವನ್ನು ಸಡಿಲಿಸಿ ರೈತರ ಸೇವೆ ಮಾಡಿ ಕೊಡಲು ಅನುವು ಮಾಡಿಕೊಡುವಂತೆ ರಾಜೇಂದ್ರ ಕುಮಾರ್ ಅವರು ತಮ್ಮ ಮನವಿಯಲ್ಲಿ ವಿನಂತಿಸಿದ್ದಾರೆ. ಅಂತೆಯೇ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಕ್ಕೆ ಜೆನರಿಕ್ ಔಷಧಿಗಳ ವಿತರಣಾ ಏಜೆನ್ಸಿಯನ್ನೂ ನೀಡುವಂತೆಯೂ ರಾಜೇಂದ್ರ ಕುಮಾರ್ ಅವರು ಮನವಿಯಲ್ಲಿ ಕೋರಿದ್ದಾರೆ.

50 ಲಕ್ಷ ರೂ.ದೇಣಿಗೆ :
ಇತ್ತೀಚೆಗೆ ರಾಜ್ಯದ ವಿವಿಧೆಡೆ ಮಳೆ ಮತ್ತು ನೆರೆಯಿಂದ ಸಂಭವಿಸಿದ ಪ್ರಕೃತಿ ವಿಕೋಪ ಪರಿಹಾರಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಐವತ್ತು ಲಕ್ಷ ರೂ. ದೇಣಿಗೆ ನೀಡಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳವು ತನ್ನ ಮಂಡಳಿ ಸಭೆಯಲ್ಲಿ ನಿರ್ಧರಿಸಿದೆ ಎಂದೂ ರಾಜೇಂದ್ರ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ