ಬೆಂಗಳೂರು, ಆ.22-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಸಂಜೆ ನವದೆಹಲಿಗೆ ತೆರಳುತ್ತಿರುವುದು ರಾಜಕೀಯ ವಲಯದಲ್ಲಿ ಮಹತ್ವ ಪಡೆದುಕೊಂಡಿದೆ.
ಕಾಂಗ್ರೆಸ್-ಜೆಡಿಎಸ್ನಿಂದ ಅನರ್ಹಗೊಂಡಿರುವ ಶಾಸಕರು ದೆಹಲಿಯಲ್ಲಿ ಕೇಂದ್ರ ಬಿಜೆಪಿ ವರಿಷ್ಠರನ್ನು ಭೇಟಿಯಾಗಲು ತೆರಳಿರುವ ಬೆನ್ನಲ್ಲೇ ಬಿಎಸ್ವೈ ಕೂಡ ರಾಷ್ಟ್ರರಾಜಧಾನಿಗೆ ಪ್ರಯಾಣ ಬೆಳೆಸುತ್ತಿರುವುದು ವಿಶೇಷ.
ಇನ್ನೊಂದೆಡೆ ಸಚಿವ ಸ್ಥಾನ ಸಿಗದೆ ಶಾಸಕರು ಅಸಮಾಧಾನ ಗೊಂಡಿರುವ ಹಿನ್ನೆಲೆಯಲ್ಲಿ ಮುಂದೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ದೆಹಲಿಗೆ ತೆರಳುತ್ತಿದ್ದಾರೆಎನ್ನಲಾಗಿದೆ.
ಮಹತ್ವ ಪಡೆದುಕೊಂಡ ದೆಹಲಿ ಪ್ರವಾಸ:
ಅನರ್ಹಗೊಂಡಿರುವ ಮಾಜಿ ಶಾಸಕರಾದ ಬಾಲಚಂದ್ರಜಾರಕಿ ಹೊಳಿ, ಡಾ.ಸುಧಾಕರ್, ಎಂ.ಟಿ.ಬಿ.ನಾಗರಾಜು, ಬಿ.ಸಿ.ಪಾಟೀಲ್, ಭೆರತಿ ಬಸವರಾಜ್, ಮಹೇಶ್ ಕುಮಟಳ್ಳಿ, ಪ್ರತಾಪ್ಗೌಡಪಾಟೀಲ್, ಮುನಿರತ್ನ, ಎಸ್.ಟಿ.ಸೋಮಶೇಖರ್, ಗೋಪಾಲಯ್ಯ, ನಾರಾಯಣಗೌಡ, ಎಚ್.ವಿಶ್ವನಾಥ್ ಸೇರಿದಂತೆ ಅನೇಕರು ಈಗಾಗಲೇ ಬಿಜೆಪಿ ವರಿಷ್ಠರ ಭೇಟಿಗೆ ದೆಹಲಿಗೆ ತೆರಳಿದ್ದಾರೆ.
ಇದರ ನಡುವೆ ಯಡಿಯೂರಪ್ಪ ಸಂಜೆ ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಾಗೂ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಕರ್ನಾಟಕದ ವಿಧಾನಸಭೆ ಸ್ಪೀಕರ್ ಅವರು ತಮ್ಮ ಸದಸ್ಯತ್ವವನ್ನು ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ 17 ಮಂದಿ ಶಾಸಕರು ಕಾನೂನು ಸಮರ ಸಾರಿದ್ದಾರೆ. ಸುಪ್ರೀಂಕೋರ್ಟ್ನಲ್ಲಿ ಇದನ್ನು ಪ್ರಶ್ನಿಸಿ ಈಗಾಗಲೇ ಮೇಲ್ಮನವಿ ಸಲ್ಲಿಸಲಾಗಿದೆ.
ಆದರೆ ಸುಪ್ರೀಂಕೋರ್ಟ್ನಲ್ಲಿ ಅಯೋಧ್ಯೆಯ ರಾಮಮಂದಿರ ವಿವಾದ ವಿಚಾರಣೆ ನಡೆಯುತ್ತಿರುವುದರಿಂದ ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ತಕ್ಷಣವೇ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ಪರಿಗಣಿಸಲಿ ಎಂದು ನ್ಯಾಯಾಲಯ ಸೂಚಿಸಿದೆ.
ಮೂರು ದಿನಗಳ ಹಿಂದೆ ಬಿಜೆಪಿಯಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಿರುವುದರಿಂದ ಸಹಜವಾಗಿ ಅನರ್ಹಗೊಂಡ ಶಾಸಕರು ಆತಂಕಕ್ಕೆ ಒಳಗಾಗಿದ್ದಾರೆ.
ನಂಬಿದ ಸಚಿವ ಸ್ಥಾನವೂ ಇಲ್ಲ. ಸುಪ್ರೀಂಕೋರ್ಟ್ನಲ್ಲಿ ಅರ್ಜಿ ವಿಚಾರಣೆಯೂ ನಡೆಯುತ್ತಿಲ್ಲ ಎಂದು ಬೇಸರಗೊಂಡಿದ್ದು, ಮಂಗಳವಾರ ರಾತ್ರಿ ಅನರ್ಹ ಶಾಸಕರು ಬಿಎಸ್ವೈ ಜೊತೆ ಮಾತುಕತೆ ನಡೆಸಿದ್ದರು. ನಿನ್ನೆಯಷ್ಟೆ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ನೇತೃತ್ವದಲ್ಲಿ ಅನರ್ಹ ಶಾಸಕರು ದೆಹಲಿಗೆ ತೆರಳಿದ್ದಾರೆ.
ಮೂಲಗಳ ಪ್ರಕಾರ ನಾಳೆ ಯಡಿಯೂರಪ್ಪ ಈ ಎಲ್ಲಾ ಅನರ್ಹ ಶಾಸಕರನ್ನು ಅಮಿತ್ ಷಾ ಮುಂದೆ ಭೇಟಿ ಮಾಡಿಸಿ ಮಾತುಕತೆ ನಡೆಸಲಿದ್ದಾರೆ. ಕಾನೂನು ಸಮರ ಸೇರಿದಂತೆ ಶಾಸಕರಿಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಈಗಾಗಲೇ ಬಿಎಸ್ವೈ ಅಭಯ ನೀಡಿದ್ದಾರೆ.