ಮತ್ತೆ ಸಂಧಾನ ಪ್ರಸ್ತಾವನೆ ವ್ಯಕ್ತಪಡಿಸಿದ ಟ್ರಂಪ್

ವಾಷಿಂಗ್ಟನ್, ಆ.21- ಭಾರತ ಮತ್ತು ಪಾಕಿಸ್ತಾನ ನಡುವಣ ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಮೂರನೇ ರಾಷ್ಟ್ರದ ಮಧ್ಯಸ್ಥಿಕೆ ಬೇಕಾಗಿಲ್ಲ ಎಂದು ನವದೆಹಲಿ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದರೂ ಕಣಿವೆ ಪ್ರಾಂತ್ಯದಲ್ಲಿ ಈಗ ಉದ್ಭವಿಸಿರುವ ಗಂಭೀರ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತೆ ಸಂಧಾನ ಪ್ರಸ್ತಾವನೆ ವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಶೀತಲ ಸಮರಕ್ಕೆ ಕಾರಣವಾಗಿರುವ ಜಮ್ಮು ಮತ್ತು ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳೂ ಒಪ್ಪಿದರೆ ತಾವು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಟ್ರಂಪ್ ಪುನಃ ಆಫರ್ ನೀಡಿದ್ದಾರೆ.

ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಾನು ಮಾತನಾಡಿದ್ದು, ಈ ವೇಳೆ ಕಾಶ್ಮೀರ ವಿಚಾರವಾಗಿ ಸುದೀರ್ಘ ಚರ್ಚೆ ನಡೆಸಿದ್ದೇನೆ. ಕಣಿವೆ ರಾಜ್ಯದಲ್ಲಿ ಉಂಟಾಗಿರುವ ಪ್ರಕ್ಷುಬ್ಧತೆಯನ್ನು ಶಮನಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಿ ಎಂದು ಮೋದಿಗೆ ಹೇಳಿದ್ದೇನೆ ಎಂದು ಟ್ರಂಪ್ ತಿಳಿಸಿದ್ದಾರೆ.

ಕಾಶ್ಮೀರ ಅತ್ಯಂತ ಸೂಕ್ಷ್ಮ ಮತ್ತು ಕಠಿಣ ಪ್ರದೇಶವಾಗಿದ್ದು, ಅಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ವಾಸಿಸುತ್ತಿದ್ದು, ಅವರು ಸಾಮರಸ್ಯಕ್ಕೆ ಅನುವು ಮಾಡಿಕೊಡಬೇಕು. ಇದಕ್ಕಾಗಿ ನನ್ನಿಂದ ಏನು ಸಾಧ್ಯವೋ ಅದನ್ನು ಪ್ರಾಮಾಣಿಕವಾಗಿ ಉತ್ತಮವಾಗಿ ಮಾಡುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ಸೋಮವಾರ ದೂರವಾಣಿ ಸಂಭಾಷಣೆ ನಡೆಸಿದ್ದ ಅಮೆರಿಕ ಅಧ್ಯಕ್ಷರು, ಕಾಶ್ಮೀರದ ವಿಚಾರವಾಗಿ ಎರಡೂ ದೇಶಗಳ ನಡುವೆ ಮನೆ ಮಾಡಿರುವ ದ್ವೇಷದ ವಾತಾವರಣ ನಿವಾರಣೆಯಾಗಬೇಕಾದ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.

ಈ ಕುರಿತು ಟ್ರಂಪ್ ಟ್ವೀಟ್ ಮಾಡಿದ್ದು, ವಾಣಿಜ್ಯ ವ್ಯವಹಾರ, ಕಾರ್ಯತಂತ್ರ ಸಹಭಾಗಿತ್ವದ ಕುರಿತು ನಾನು ಇಂದು ನನ್ನ ಗೆಳೆಯರಾದ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ಸಮಾಲೋಚನೆ ನಡೆಸಿದೆ. ಎಲ್ಲಕ್ಕೂ ಮುಖ್ಯವಾಗಿ, ಕಾಶ್ಮೀರದ ವಿಚಾರವಾಗಿ ಆ ಎರಡೂ ದೇಶಗಳ ನಡುವೆ ಮನೆ ಮಾಡಿರುವ ಆತಂಕ, ದ್ವೇಷದ ವಾತಾವರಣ ನಿವಾರಣೆಗೊಳ್ಳಬೇಕಾದ ಅಗತ್ಯವನ್ನು ತಿಳಿಸಿದ್ದೇನೆ. ಕಠಿಣ ಸನ್ನಿವೇಶದಲ್ಲಿ ಉತ್ತಮ ಸಮಾಲೋಚನೆ ನಡೆಯಿತು, ಎಂದು ಅವರು ಹೇಳಿಕೊಂಡಿದ್ದಾರೆ.

ಮೂರನೇ ರಾಷ್ಟ್ರದ ಮಧ್ಯಸ್ಥಿಕೆ ಒಂದೆಡೆ ಭಾರತ ತಿರಸ್ಕರಿಸಿದ್ದು, ಮತ್ತೊಂದು ಅಮೆರಿಕ ಹಸ್ತಕ್ಷೇಪ ಮಾಡುವಂತೆ ಪಾಕಿಸ್ತಾನ ಆಗ್ರಹಿಸುತ್ತಿರುವ ಬೆನ್ನಲ್ಲೆ ಮುಂದಿನ ಬೆಳವಣಿಗೆ ಕುತೂಹಲಕಾರಿಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ