ಬೆಂಗಳೂರು, ಆ.21-ನಗರದ ಶಿವಾನಂದ ವೃತ್ತದ ಬಳಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಯನ್ನು ಕಾಲಮಿತಿಯೊಳಗೆ ಮುಗಿಸುವಂತೆ ಮೇಯರ್ ಗಂಗಾಂಬಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಮೇಲ್ಸೇತುವೆ ಕಾಮಗಾರಿ ವಿಳಂಬ ಕುರಿತು ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಕಾಮಗಾರಿ ವಿಳಂಬವಾಗಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಯಾವ ಕಾರಣಕ್ಕೆ ಕಾಮಗಾರಿ ವಿಳಂಬವಾಗುತ್ತಿದೆ.ಇದರಿಂದಾಗಿ ಸಂಚಾರ ದಟ್ಟನೆಯಾಗುತ್ತಿದ್ದು, ಜನ ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ.ಕೂಡಲೇ ಕಾಮಗಾರಿಯನ್ನು ಚುರುಕುಗೊಳಿಸಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಆದೇಶಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಧಿಕಾರಿಗಳು ಒಂಭತ್ತು ತಿಂಗಳೊಳಗೆ ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
ರಸ್ತೆ ವಿಭಾಗದ ಮುಖ್ಯ ಇಂಜಿನಿಯರ್ ರಮೇಶ್ ಮಾತನಾಡಿ, ಈ ಹಿಂದೆ 326.25ಮೀಟರ್ ಉದ್ದದ ಮೇಲ್ಸೇತುವೆ ನಿರ್ಮಾಣ ಮಾಡಲು ಅನುಮೋದನೆ ಸಿಕ್ಕಿತ್ತು. ಆದರಂತೆ ಕಾಮಗಾರಿ ಪ್ರಾರಂಭಿಸಲಾಯಿತು.ಆದರೆ ವೃತ್ತದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಬಾರದೆಂದು ಸ್ಥಳೀಯರು ಸುಪ್ರೀಂ ಕೋರ್ಟ್ ಮೊರೆ ಹೋದರು.
ಆ ನಂತರ ಸಂಚಾರ ದಟ್ಟಣೆ ನಿವಾರಣೆ ಮಾಡಲು ಈಗಿರುವ ಮೇಲ್ಸೇತುವೆ ಚಿಕ್ಕದಾಗಿರುವುದರಿಂದ ಅದನ್ನು ವಿಸ್ತರಿಸುವಂತೆ ನ್ಯಾಯಾಲಯ ಸೂಚನೆ ನೀಡಿದ್ದು, ಅದರಂತೆ 482ಮೀಟರ್ ಉದ್ದದ ಮೇಲ್ಸೇತುವೆ ನಿರ್ಮಾಣ ಮಾಡಲು ನಕ್ಷೆ ಬದಲಾಯಿಸಲಾಯಿತು ಎಂದು ಹೇಳಿದರು.
ಈ ಸಂಬಂಧ 72ಫೈಲ್ಸ್ಗಳ ಮೇಲೆ 16 ಫಿಲ್ಲರ್ಗಳು, 783 ಚದರ ಮೀ.ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ.ಅಲ್ಲದೆ ಜಲಮಂಡಳಿಯ ಪೈಪ್ಲೈನ್ ಒಳಚರಂಡಿ ಬದಲಾಯಿಸುವುದು ಸೇರಿದಂತೆ ಒಟ್ಟು 60ಕೋಟಿ ರೂ.ವೆಚ್ಚವಾಗಲಿದೆ. ಇದಕ್ಕೆ ಅನುಮೋದನೆ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ಸಿಕ್ಕ ಕೂಡಲೇ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸುತ್ತೇವೆ ಎಂದು ರಮೇಶ್ ವಿವರಿಸಿದರು.
ಇದನ್ನು ಆಲಿಸಿದ ಮೇಯರ್ ಸರ್ಕಾರದಿಂದ ಅನುಮೋದನೆ ಸಿಕ್ಕ ಕೂಡಲೇ ಕಾಮಗಾರಿಗೆ ವೇಗ ನೀಡಿ, ಜಲಮಂಡಳಿ ಅಧಿಕಾರಿಗಳ ಜತೆ ಸಭೆ ನಡೆಸಿ ಪೈಪ್ಲೈನ್ ಮತ್ತು ಒಳಚರಂಡಿ ಕಾಮಗಾರಿಯನ್ನು ಶೀಘ್ರ ಮುಗಿಸುವಂತೆ ಸೂಚಿಸಿದರು.
ಶಿವಾನಂದ ವೃತ್ತದ ಬಳಿ ರಸ್ತೆ ಉದ್ದಕ್ಕೂ ಗುಂಡಿಗಳಲ್ಲಿ ಮಳೆ ನೀರು ನಿಂತಿದ್ದನ್ನು ಕಂಡು ಬೇಸರಗೊಂಡ ಮೇಯರ್ ಕೂಡಲೇ ಗುತ್ತಿಗೆದಾರರನ್ನು ಕರೆಸಿ ರಸ್ತೆಯನ್ನು ದುರಸ್ತಿ ಪಡಿಸುವಂತೆ ಆದೇಶಿಸಿದರು.