ಮಾರುಕಟ್ಟೆ ಹಿನ್ನಡೆ ಹಾಗೂ ಉತ್ಪಾದನೆಯ ಕುಸಿತ ಹಿನ್ನಲೆ-8 ರಿಂದ 10 ಸಾವಿರ ಮಂದಿ ಕೆಲಸ ಕಳೆದುಕೊಳ್ಳುವ ಸಾಧ್ಯತೆ

ನವದೆಹಲಿ, ಆ.21-ಮಾರುಕಟ್ಟೆ ಹಿನ್ನಡೆ ಹಾಗೂ ಉತ್ಪಾದನೆಯ ಕುಸಿತದಿಂದಾಗಿ ಪಾರ್ಲೆ ಬಿಸ್ಕಟ್‍ಕಂಪನಿ 10 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿದೆ.

ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿರುವ ಕಂಪನಿಯ ಪ್ರತಿನಿಧಿ, ಕೆಲವು ಉತ್ಪಾದನಾ ಘಟಕಗಳನ್ನು ಮುಚ್ಚಬೇಕಿದ್ದು, ಇದರಿಂದ 8 ರಿಂದ 10 ಸಾವಿರ ಮಂದಿ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಎಂದಿದ್ದಾರೆ.

ಪರಿಸ್ಥಿತಿ ತುಂಬಾ ಕೆಟ್ಟದ್ದಾಗಿದೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸದೆ ಇದ್ದರೆ, ಅನಿವಾರ್ಯವಾಗಿ ನಮ್ಮನ್ನು ಉತ್ಪಾದನಾ ಘಟಕಗಳನ್ನು ಮುಚ್ಚುವ ಪರಿಸ್ಥಿತಿಗೆ ದೂಡಿದಂತಾಗುತ್ತದೆ ಎಂದು ಪಾರ್ಲೆಯ ಮುಖ್ಯಸ್ಥ ಮಾಣಿಕ್ ಷಾ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

1929ರಲ್ಲಿ ಆರಂಭವಾದ ಪಾರ್ಲೆ ಸಂಸ್ಥೆ ಸುಮಾರು ಒಂದು ಲಕ್ಷ ಮಂದಿಗೆ ಉದ್ಯೋಗ ನೀಡಿದೆ. ಕಂಪನಿಯ ನೇರ ಒಡೆತನದ 10 ಮತ್ತು ಗುತ್ತಿಗೆ ಆಧಾರದ ಮೇಲೆ 125 ಉತ್ಪಾದನಾಘಟಕಗಳನ್ನು ಹೊಂದಿದೆ.

ಏಷ್ಯಾ ಖಂಡದ ಬಿಸ್ಕೆಟ್ ಮಾರುಕಟ್ಟೆಯಲ್ಲಿ ಪಾರ್ಲೆ ಮೂರನೇ ಸ್ಥಾನ ಗಳಿಸಿದೆ. ಜಿಎಸ್‍ಟಿ ನಂತರ ಬಿಸ್ಕಟ್‍ನ ದರ ಏರಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಹಿನ್ನಡೆಯಾಗುತ್ತಿದೆ. ಗ್ರಾಮೀಣ ಭಾಗದಲ್ಲಂತೂ ಕೊಳ್ಳುವವರಿಲ್ಲದಂತಾಗಿದೆ ಎಂದು ಅವರು ತಿಳಿಸಿದ್ದಾರೆ.

ವಾರ್ಷಿಕ 1.4 ಬಿಲಿಯನ್ ಡಾಲರ್‍ವಹಿವಾಟು ಹೊಂದಿರುವ ಪಾರ್ಲೆ ಸಂಸ್ಥೆ ಈಗ ಆತಂಕವನ್ನು ಹೊರಹಾಕಿದೆ. ಇದಕ್ಕೂ ಮೊದಲು ಕಾರು, ಬಟ್ಟೆ ಉತ್ಪಾದನಾ ಕಂಪನಿಗಳು ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದರು. ಈಗ ಬಿಸ್ಕಟ್‍ಉದ್ಯಮದ ದೈತ್ಯ ಸಂಸ್ಥೆಯು ಅದೇ ಹಾದಿಯಲ್ಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ