ಬೆಂಗಳೂರು, ಆ.21- ಯುದ್ದ ಕಾಲದಲ್ಲಿ ಶಸ್ತ್ರಭ್ಯಾಸ ಎಂಬ ಅಲಸ್ಯದಿಂದ ಹೊರ ಬರದ ಕಾಂಗ್ರೆಸ್, ಉಪಚುನಾವಣೆಗಳು ಎದುರಿಗಿದ್ದರೂ ಪಕ್ಷದ ಪದಾಧಿಕಾರಿಗಳ ನೇಮಕ ಮಾಡದೆ ನಿರ್ಲಿಪ್ತವಾಗಿರುವುದು ಕಾರ್ಯಕರ್ತರ ಆತಂಕಕ್ಕೆ ಕಾರಣವಾಗಿದೆ.
ದಿನೇಶ್ ಗುಂಡುರಾವ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಬಹಳಷ್ಟು ಮಂದಿ ಪಕ್ಷದ ಪದಾಧಿಕಾರಿಗಳು ಕೆಲಸ ಮಾಡದೆ ತಟಸ್ಥವಾಗಿ ಉಳಿದಿದ್ದರು. ಹಲವು ಬಾರಿ ಸಭೆ ನಡೆಸಿ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿರಲಿಲ್ಲ. ಅಂತಿಮವಾಗಿ ಜೂನ್ 19ರಂದು ಹೈ ಕಮಾಂಡ್ ದಿನೇಶ್ ಗುಂಡುರಾವ್ ಅವರ ಶಿಫಾರಸ್ಸಿನ ಮೇರೆಗೆ ಕೆಪಿಸಿಸಿಯ ಕಾರ್ಯಕಾರಿ ಸಮಿತಿಯನ್ನು ವಿಸರ್ಜನೆ ಮಾಡಿತ್ತು. ಆಗಿನ್ನೂ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿತ್ತು. ಹೊಸದಾಗಿ ಪದಾಧಿಕಾರಿಗಳಾಗಲು ನಾ ಮುಂದು ತಾ ಮುಂದು ಎಂದು ಮುಖಂಡರು ಲಾಭಿ ನಡೆಸುತ್ತಿದ್ದರು.
ಪದಾಧಿಕಾರಿಗಳ ಸಮಿತಿ ವಜಾಗೊಂಡ ನಂತರ ಕ್ಷೀಪ್ರ ರಾಜಕೀಯ ಬೆಳವಣಿಗೆಗಳು ನಡೆದು ಸಮ್ಮಿಶ್ರ ಸರ್ಕಾರವೂ ಪತನವಾಯಿತು. ವಿರೋಧ ಪಕ್ಷದಲ್ಲಿದ್ದಾಗ ಪಕ್ಷ ಸಂಘಟನೆ ಮಾಡುವುದು ಸವಾಲಿನ ಕೆಲಸವಾಗಿದ್ದು, ಪ್ರತಿ ಹಂತದಲ್ಲು ಕೈಯಿಂದ ಹಣ ಖರ್ಚು ಮಾಡಿಕೊಂಡು ಕೆಲಸ ಮಾಡುವ ಸ್ಥಿತಿ ಇರುತ್ತದೆ. ಹಾಗಾಗಿ ಹೊಸದಾಗಿ ಪದಾಧಿಕಾರಿಗಳಾಗಲು ಯುವ ಉತ್ಸಾಹಿ ನಾಯಕರು ಮುಂದೆ ಬರುತ್ತಿಲ್ಲ.
ಹಣ ಇದ್ದವರು, ನೆಪ ಮಾತ್ರಕ್ಕೆ ಪದಾಧಿಕಾರಿಗಳಾಗಲು ಬಯಸುವವರು ಮಾತ್ರ ಲಾಭಿ ನಡೆಸುತ್ತಿದ್ದಾರೆ.ಅವರಿಗೆ ಅವಕಾಶ ನೀಡಲು ಮುಖಂಡರಿಗೆ ಇಷ್ಟವಿಲ್ಲ. ಹೀಗಾಗಿ ಕಳೆದ ಮೂರು ತಿಂಗಳಿನಿಂದಲೂ ಕೆಪಿಸಿಸಿ ಸೈನಿಕರಿಲ್ಲದೆ ಯುದ್ಧ ಮಾಡುವಂತಹ ದುಸ್ಥಿತಿಗೆ ತಲುಪಿದೆ.
ರಾಜ್ಯದಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು 17 ಕ್ಷೇತ್ರಗಳಿಗೆ ಶೀಘ್ರವೇ ಉಪಚುನಾವಣೆ ನಡೆಯುವ ಸಾಧ್ಯತೆಗಳಿವೆ. ಸವಾಲಿನ ದಿನಗಳಲ್ಲಿಯೂ ಕಾಂಗ್ರೆಸ್ ಬಳಿ ಪದಾಧಿಕಾರಿಗಳು ಇಲ್ಲದಂತಾಗಿದೆ.
ಹಿಂದಿನ ಸಮಿತಿಯಲ್ಲಿದ್ದ ಕೆಲವರು ಅನೌಪಚಾರಿಕವಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ.ಅದರಲ್ಲೂ ದಿನೇಶ್ ಗುಂಡುರಾವ್ ಮತ್ತು ಸಿದ್ದರಾಮಯ್ಯ ಅವರ ಆಪ್ತರಾಗಿದ್ದವರು ಮಾತ್ರ ತಟಸ್ಥವಾಗಿರಲು ಮನಸ್ಸಿಲ್ಲದೆ ಸಣ್ಣಪುಟ್ಟ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.ಬಹಳಷ್ಟು ಮಂದಿ ಪದಾಧಿಕಾರಿಗಳು ತಮ್ಮನ್ನು ಏಕಾಏಕಿ ವಜಾಗೊಳಿಸಿದ್ದರಿಂದ ಮುನಿಸಿಕೊಂಡು ಸಂಘಟನೆಯಿಂದ ದೂರ ಉಳಿದಿದ್ದಾರೆ.
ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರದ ವಿಚಾರಣೆಯಲ್ಲಿ ವಿಧಾನಸಭಾಧ್ಯಕ್ಷರಿಂದ ಅನರ್ಹಗೊಂಡಿರುವ 13 ಮಂದಿ ಅತೃಪ್ತರನ್ನು ಉಚ್ಛಾಟಿಸಿದ ಸಮಯದಲ್ಲೇ ಕೆಪಿಸಿಸಿ ಅತೃಪ್ತರ ಕ್ಷೇತ್ರಗಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನೂ ಉಚ್ಚಾಟನೆ ಮಾಡಿದೆ. ಹೀಗಾಗಿ ಉಪಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೇ ಇಲ್ಲವಾಗಿದೆ.ಅತ್ತ ರಾಜ್ಯ ಮಟ್ಟದ ಪದಾಧಿಕಾರಿಗಳು ಇಲ್ಲ.
ಇನ್ನೊಂದೆಡೆ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿ 17 ಕ್ಷೇತ್ರಗಳಲ್ಲೂ ಅಕಾಡಕ್ಕಿಳಿದು ಚುನಾವಣೆಯ ತಯಾರಿಯಲ್ಲಿ ತೊಡಗಿದೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಕೂಡ ಚುನಾವಣೆಯ ತಾಲೀಮನ್ನು ಆರಂಭಿಸಿದೆ. ಆದರೆ ಕಾಂಗ್ರೆಸ್ ಮಾತ್ರ ಈವರೆಗೂ ಎಚ್ಚೆತ್ತುಕೊಂಡಿಲ್ಲ. ಚುನಾವಣೆಗೆ ಮುಂಚಿತವಾಗಿ ಅಭ್ಯರ್ಥಿಗಳ ಆಯ್ಕೆ ಮಾಡುವುದಂತೂ ದೂರದ ಮಾತು, ಕನಿಷ್ಠ ಪದಾಧಿಕಾರಿಗಳನ್ನು ನಿಯೋಜಿಸದೆ ಅಲಕ್ಷ್ಯ ವಹಿಸಿದೆ.ಇದರಿಂದಾಗಿ ಉಪಚುನಾವಣೆಯಲ್ಲಿ ಪಕ್ಷಕ್ಕೆ ಮತ್ತೊಮ್ಮೆ ಹಿನಾಯ ಸೋಲುಂಟಾಗಬಹುದು ಎಂಬ ಆತಂಕ ಕಾರ್ಯಕರ್ತರನ್ನು ಕಾಡುತ್ತಿದೆ.
ಉಪಚುನಾವಣೆಗಳನ್ನು ಸಮರ್ಥವಾಗಿ ಎದುರಿಸಿ 17 ಕ್ಷೇತ್ರಗಳಲ್ಲೂ ಮತ್ತೆ ಕಾಂಗ್ರೆಸ್-ಜೆಡಿಎಸ್ ಪಕ್ಷಗಳೇ ಗೆದ್ದರೆ ಮತ್ತೆ ಅಧಿಕಾರ ಹಿಡಿಯುವ ಸಾಧ್ಯತೆಗಳಿವೆ. ಈ ಸಾಧ್ಯಾಸಾಧ್ಯತೆಗಳ ಅರಿವಿದ್ದರೂ ರಾಜ್ಯ ನಾಯಕರು ದಿವ್ಯ ನಿರ್ಲಕ್ಷ್ಯದಿಂದ ಇರುವುದು ಅಚ್ಚರಿಗೆ ಕಾರಣವಾಗಿದೆ.ಉಪಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಕಾಂಗ್ರೆಸ್ ನಾಯಕರೇ ಒಳಒಪ್ಪಂದದ ಮೂಲಕ ಸಹಾಯ ಮಾಡುತ್ತಿದ್ದಾರೆಯೇ ಎಂಬ ಗುಸು ಗುಸು ಕೂಡ ಕೇಳಿ ಬರಲಾರಂಭಿಸಿದೆ.