ಹಾಕಿ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಜಯ

ಟೋಕಿಯೋ, ಆ.21- ಇಲ್ಲಿ ನಡೆದ ಒಲಿಂಪಿಕ್ ಪರೀಕ್ಷಾ ಸುತ್ತಿನ ಪುರುಷರ ಹಾಕಿ ಫೈನಲ್ ಪಂದ್ಯದಲ್ಲಿ ಭಾರತ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು 5-0 ಗೋಲುಗಳಿಂದ ಮಣಿಸಿ ಪ್ರಶಸ್ತಿ ಗಳಿಸಿದೆ.

ಅಲ್ಲದೆ, ಈ ಭರ್ಜರಿ ಗೆಲುವಿನೊಂದಿಗೆ 2020ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ಅರ್ಹತೆ ಗಳಿಸಿದೆ.

ಜಪಾನ್ ರಾಜಧಾನಿ ಟೋಕಿಯೋದಲ್ಲಿ ಇಂದು ನಡೆದ ರೌಂಡ್ ರಾಬಿನ್ ಹಾಕಿ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಅಮೋಘ ಗೆಲುವು ದಾಖಲಿಸಿತು.

ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 1-0 ಗೋಲುಗಳಿಂದ ಪರಾಭವಗೊಂಡಿದ್ದ ಭಾರತ ತಂಡ ಫೈನಲ್‍ನಲ್ಲಿ 5-0 ಗೋಲುಗಳಿಂದ ನ್ಯೂಜಿಲೆಂಡ್ ಮೇಲೆ ಸೇಡು ತೀರಿಸಿಕೊಂಡಿತು.

ಭಾರತೀಯ ತಂಡದ ನಾಯಕ ಹರ್ಮನ್‍ಪ್ರೀತ್‍ಸಿಂಗ್ (7 ನಿಮಿಷ), ಶಂಶೇರ್‍ಸಿಂಗ್ (18 ನಿ.), ನೀಲ್‍ಕಾಂತ್‍ಶರ್ಮ (22), ಗುರುಸಾಹಿದ್‍ಸಿಂಗ್ (26 ನಿ.), ಮನ್‍ದೀಪ್‍ಸಿಂಗ್ (27ನಿ.) ಭಾರತದ ಪರ ತಲಾ ಒಂದೊಂದು ಗೋಲುಗಳನ್ನು ಬಾರಿಸಿ ಭರ್ಜರಿ ಗೆಲುವಿನ ರೂವಾರಿಯಾದರು.

ಭಾರತದ ಆಕ್ರಮಣಕಾರಿ ಆಟದ ಮುಂದೆ ಪ್ರಬಲ ನ್ಯೂಜಿಲೆಂಡ್ ತಂಡ ಒಂದೇ ಒಂದು ಗೋಲು ಗಳಿಸಲು ಸಾಧ್ಯವಾಗಲಿಲ್ಲ.

ನಿನ್ನೆ ನಡೆದ ಎರಡನೆ ಪಂದ್ಯದಲ್ಲಿ ಸ್ಟ್ರೈಕರ್ ಮನ್‍ದೀಪ್‍ಸಿಂಗ್ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಭಾರತ ಆತಿಥೇಯ ಜಪಾನ್ ವಿರುದ್ಧ ಜಯ ಸಾಧಿಸಿ ಫೈನಲ್ ಪ್ರವೇಶಿಸಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ