ಬೆಂಗಳೂರು,ಆ.21-ನನಗೆ ಸಚಿವ ಸ್ಥಾನ ಬೇಡ. ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಉಮೇಶ್ಕತ್ತಿ ಅವರನ್ನು ಸಮಾಧಾನ ಪಡಿಸಿ ಸರ್ಕಾರ ಉತ್ತಮ ರೀತಿಯಲ್ಲಿ ನಡೆದುಕೊಂಡು ಹೋಗುವಂತಾದರೆ ಸಾಕು ಎಂದು ಮಾಜಿ ಸಚಿವ ಹಾಗೂ ಅರಬಾವಿ ಕ್ಷೇತ್ರದ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿ ಹೊಳಿ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು, ವಿಧಾನಪರಿಷತ್ ಸದಸ್ಯರೂ ಅಲ್ಲದ ಲಕ್ಷ್ಮಣ್ ಸವದಿ ಅವರಿಗೆ ಸಚಿವ ಸ್ಥಾನ ನೀಡಿರುವುದು ಸರಿಯೆನಿಸುತ್ತಿಲ್ಲ. ಆದರೆ ಪಕ್ಷದ ಹೈಕಮಾಂಡ್ ತೀರ್ಮಾನ ತೆಗೆದುಕೊಂಡಿದ್ದಾಗಿದೆ.ನಾವು ಅದನ್ನು ಪ್ರಶ್ನಿಸುವುದಿಲ್ಲ ಎಂದಿದ್ದಾರೆ.
ಈ ಹಿಂದೆ ಉಮೇಶ್ ಕತ್ತಿ ಅವರ ಸಹೋದರರಿಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ತಪ್ಪಿತ್ತು. ಆ ಅಸಮಾಧಾನವನ್ನು ಈಗ ಸಚಿವ ಸ್ಥಾನ ನೀಡಿ ಸರಿಪಡಿಸಬಹುದು ಎಂಬ ನಿರೀಕ್ಷೆಗಳಿದ್ದವು.ಆದರೆ ರಾಜಕೀಯವಾಗಿ ಪಕ್ಷ ಬೇರೆನೇ ತೀರ್ಮಾನ ತೆಗೆದುಕೊಂಡಿದೆ.ಇದರಿಂದ ಉಮೇಶ್ಕತ್ತಿ ಅವರಿಗೆ ತೀವ್ರ ಅಸಮಾಧಾನವಾಗಿದೆ.
ಪಕ್ಷದ ಹಿರಿಯ ನಾಯಕರು ಅವರೊಂದಿಗೆ ಮಾತುಕತೆ ನಡೆಸಿ ಸಮಾಧಾನಪಡಿಸಬೇಕು ಎಂದು ಹೇಳಿದರು.
ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಯಾರ ಬಳಿಯೂ ಅಧಿಕಾರಕ್ಕಾಗಿ ಬೇಡಿಕೆ ಇಟ್ಟಿಲ್ಲ. ಒಂದೆರಡು ತಿಂಗಳ ಮಟ್ಟಿಗೆ ಸಚಿವನಾಗುವ ಅಗತ್ಯವೂ ನನಗಿಲ್ಲ.
ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನಂತರ ಅನರ್ಹಗೊಂಡಿರುವ 17 ಮಂದಿಯ ಪೈಕಿ ಕೆಲವರಿಗೆ ಶೀಘ್ರವೇ ನ್ಯಾಯಾಲಯದ ಪ್ರಕರಣವನ್ನು ಇತ್ಯರ್ಥ ಪಡಿಸಿಕೊಳ್ಳುವಂತೆ ಸಲಹೆ ನೀಡಿದ್ದೇನೆ. ಪ್ರಕರಣ ಇತ್ಯರ್ಥವಾದ ತಕ್ಷಣವೇ ರಮೇಶ್ಜಾರಕಿ ಹೊಳಿ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ.
ಆವರೆಗೂ ತಾತ್ಕಾಲಿಕವಾಗಿ ನಾನು ಸಚಿವನಾಗಿರಲು ಬಯಸುವುದಿಲ್ಲ. ಜಿಲ್ಲೆಯ ಮಟ್ಟಿಗೆ ಲಕ್ಷ್ಮಣ್ ಸವದಿ ಅವರಿಗೆ ಅವಕಾಶ ಸಿಕ್ಕಿದೆ. ಮತ್ತೊಬ್ಬರಿಗೆ ಅವಕಾಶ ಸಿಗುವ ಬಗ್ಗೆ ಅನುಮಾನಗಳಿವೆ. ಉಮೇಶ್ಕತ್ತಿ ಅವರಿಗೆ ಸಚಿವ ಸ್ಥಾನ ಕೊಟ್ಟರೆ ಸಾಕು ಎಂದು ಹೇಳಿದರು.
ರಾಜಕಾರಣದಲ್ಲೂ ಯಾರು ಶಾಶ್ವತವಾಗಿ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ. ರಮೇಶ್ಜಾರಕಿ ಹೊಳಿ, ಲಕ್ಷ್ಮಣ್ ಸವದಿ, ಉಮೇಶ್ ಕತ್ತಿ ಅವರೆಲ್ಲ ಒಂದಾಗಿ ಕೆಲಸ ಮಾಡಿದರೆ ಜಿಲ್ಲೆಯಲ್ಲಿ ಬಿಜೆಪಿಯನ್ನು ಬಲಿಷ್ಠವಾಗಿ ಕಟ್ಟಲು ಸಾಧ್ಯ. ಆದರೆ ಪ್ರಸ್ತುತ ಸಂದರ್ಭದಲ್ಲಿ ಅದು ಅಷ್ಟು ಸುಲಭವಲ್ಲ. ನಿನ್ನೆ ಲಕ್ಷ್ಮಣ್ ಸವದಿ ಮತ್ತು ರಮೇಶ್ ಜಾರಕಿ ಹೊಳಿ ಭೇಟಿ ಮಾಡಿದ್ದಾರೆ.ನಾನು ಮತ್ತು ಉಮೇಶ್ಕತ್ತಿ ಅವರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ.
ಶೀಘ್ರವೇ ವಾತಾವರಣ ತಿಳಿಯಾಗುವ ವಿಶ್ವಾಸವಿದೆ.ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆಯಿಂದ ಆರಂಭವಾದ ಕೆಲವು ಅಸಮಾಧಾನಗಳು ಉಳಿದುಕೊಂಡಿವೆ ಎಂದು ಅವರು ಹೇಳಿದರು.
ಜನರ ಪ್ರೀತಿ ಮತ್ತು ದೇವರ ಆಶೀರ್ವಾದ ಇರುವವರೆಗೂ ಜಾರಕಿ ಹೊಳಿ ಕುಟುಂಬವನ್ನು ರಾಜಕೀಯವಾಗಿ ಮೂಲೆಗುಂಪು ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಲಕ್ಷ್ಮಣ್ ಸವದಿ ಅವರ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿ ಯಾರಿಗೂ ಉಪಮುಖ್ಯಮಂತ್ರಿ ಹುದ್ದೆ ಕೊಡುವ ನಿರೀಕ್ಷೆಗಳಿಲ್ಲ. ರಮೇಶ್ಜಾರಕಿ ಹೊಳಿ ಅವರಿಗೆ ಸಚಿವ ಸ್ಥಾನ ಸಿಕ್ಕರೆ ಸಾಕು, ನಾವು ಉಪಮುಖ್ಯಮಂತ್ರಿ ಹುದ್ದೆಗಾಗಿ ಬೇಡಿಕೆ ಇಟ್ಟಿಲ್ಲ ಎಂದು ಹೇಳಿದರು.
ಸದ್ಯಕ್ಕೆ ನಾನು ಬೆಂಗಳೂರಿನಲ್ಲೇ ಉಳಿದು ಬಾಕಿ ಇರುವ ಕೆಲಸಗಳನ್ನು ಮುಗಿಸುತ್ತೇನೆ. ಅಗತ್ಯಬಿದ್ದರೆ ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.