ನವದೆಹಲಿ, ಆ.21- ರಸ್ತೆ ಮೇಲೆ ಹಳೆ ಕಾರುಗಳು ಸಂಚರಿಸುತ್ತಿಲ್ಲ. ಹೀಗಿರುವಾಗ 44 ವರ್ಷಗಳಷ್ಟು ಹಳೆಯದಾದ ಯುದ್ಧ ವಿಮಾನಗಳು ಏಕೆ..? ಭಾರತೀಯ ವಾಯುಪಡೆಯ(ಐಎಎಫ್) ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ.ಎಸ್.ಧನೋವಾ ಅವರ ಪ್ರಶ್ನೆ ಇದು.
ಐಎಎಫ್‍ಗೆ 1973-74ರಲ್ಲಿ ಸೇರ್ವಡೆಯಾದ ಹಳೆಯ ಮಿಗ್-21 ಯುದ್ಧ ವಿಮಾನಗಳನ್ನು ಉಲ್ಲೇಖಿಸಿದ ಅವರು ಭಾರತೀಯ ವಾಯುಪಡೆಯನ್ನು ಅತ್ಯಾಧುನೀಕರಣಗೊಳಿಸುವ ಅಗತ್ಯವನ್ನು ಪ್ರಸ್ತಾಪಿಸಿದರು.
ನವದೆಹಲಿಯಲ್ಲಿ ನಿನ್ನೆ ನಡೆದ ಐಎಎಫ್‍ನ ಸ್ವಾವಲಂಬನೆ ಕುರಿತ ವಿಚಾರ ಸಂಕಿರಣದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಮುಂದೆಯೇ ಧನೋವಾ ಈ ಪ್ರಶ್ನೆ ಕೇಳಿ ಕೇಂದ್ರ ಸರ್ಕಾರವನ್ನು ತಬ್ಬಿಬ್ಬುಗೊಳಿಸಿದರು.
ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ಹಳೆಯ ಸಮಯ ವಿಮಾನಗಳನ್ನು ಬಳಕಿ ಭಾರೀ ನಷ್ಟದೊಂದಿಗೆ ಗೆಲವು ಸಾಧಿಸಬೇಕೆ ಎಂದು ಪ್ರಶ್ನಿಸಿದ ಅವರು, ಪ್ರಸ್ತುತ ಗಂಡಾಂತರ ಸನ್ನಿವೇಶದಲ್ಲಿ ಭಾರತೀಯ ವಾಯುಪಡೆಗೆ ಅತ್ಯಾಧುನಿಕ ಫೈಟರ್ ಜೆಟ್‍ಗಳು ಮತ್ತು ಯುದ್ಧೋಪಕರಣಗಳ ಅನಿವಾರ್ಯತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂಬ ಸಂಗತಿಯನ್ನು ಗಮನಕ್ಕೆ ತಂದರು.
ನಮ್ಮ ಸೇನಾ ಪಡೆಯಲ್ಲಿ ಈಗಲೂ 44 ವರ್ಷಗಳಷ್ಟು ಹಳೆಯ ಮಿಗ್-21 ಫೈಟರ್ ಜೆಟ್‍ಗಳಿವೆ. ಈಗ ಯಾರೂ ಕೂಡ ರಸ್ತೆ ಮೇಲೆ ಓಬೀರಾಯನ ಕಾಲದ ಕಾರುಗಳನ್ನು ಚಾಲನೆ ಮಾಡುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಐಎಎಫ್‍ಗೆ ನಾಲ್ಕು ದಶಕಗಳಷ್ಟು ಹಳೆಯ ಯುದ್ಧ ವಿಮಾನಗಳು ಬೇಕೆ ಎಂದು ಅವರು ಪ್ರಶ್ನಿಸಿದರು.