ರಾಜಕೀಯ ಕಳಂಕ :ಚಿದಂಬರಂ ಇಡಿ ಮತ್ತು ಸಿಬಿಐ ವಶಕ್ಕೆ :೩೧ ಗಂಟೆಗಳ ನಾಟಕ ಅಂತ್ಯ

ನವದೆಹಲಿ-ಹಲವು ನಾಟಕೀಯ ಬೆಳವಣಿಗೆಯ ಬಳಿಕ ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ದೇಶದ ಇತಿಹಾಸದಲ್ಲೇ ಭ್ರಷ್ಟಾಚಾರದ ಆರೋಪದ ಮೇಲೆ ಕೇಂದ್ರದ ಗೃಹ ಸಚಿವರನ್ನು ಸಿಬಿಐ ಬಂಧಿಸಿದ ಪ್ರಕರಣ ಇದೇ ಮೊದಲು.

ಬಿಳಿಯ ಕಾರಿನಲ್ಲಿ, ಬಿಳಿ ಬಟ್ಟೆ ಧರಿಸಿದ್ದ ಚಿದಂಬರಂ ಅವರನ್ನು ಕರೆದುಕೊಂಡು ಹೋಗಲಾಯಿತು. ಚಿದಂಬರಂ ಅವರ ಜೋರ್ ಬಾಗ್ ನಿವಾಸದ ಮುಂದೆ ಕಿಕ್ಕಿರಿದು ಸೇರಿದ್ದ ಮಾಧ್ಯಮದವರು, ಕಾಂಗ್ರೆಸ್ ಕಾರ್ಯಕರ್ತರು, ಪೊಲೀಸರು ಈ ಘಟನೆಗೆ ಸಾಕ್ಷಿಯಾದರು.

ಐಎನ್‌ಎಕ್ಸ್‌ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿ.ಚಿದಂರಂ ಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ಇಂದು ದೆಹಲಿ ಹೈಕೋರ್ಟ್ ರದ್ದು ಮಾಡಿತು ಹಾಗಾಗಿ ಬೆಳಿಗ್ಗೆಯಿಂದಲೂ ಪಿ.ಚಿದಂಬರಂ ಬಂಧನ ಭೀತಿ ಎದುರಿಸುತ್ತಿದ್ದರು. ಅವರು ಸಿಬಿಐನಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ ಎನ್ನಲಾಗಿತ್ತು.

ಚಿದಂಬರಂ ಬಂಧನದ ಬಳಿಕ ಪ್ರತಿಕ್ರಿಯೆ ನೀಡಿದ ಮಗ ಕಾರ್ತಿ ಚಿದಂಬರಂ ಅವರು, ಇದು ರಾಜಕೀಯ ಪ್ರೇರಿತ ದಾಳಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕೇಂದ್ರ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಚಿದಂಬರಂ ಅವರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್​ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷದ ಕಚೇರಿ ಮುಂದೆ ರಾತ್ರಿಯಿಡೀ ಪ್ರತಿಭಟನೆ ನಡೆಸಿದರು.

ಐಎನ್​ಎಕ್ಸ್​ ಮೀಡಿಯಾ ಪ್ರಕರಣ ಸಂಬಂಧ ಇ.ಡಿ.ಯಿಂದ ಪಿ.ಚಿದಂಬರಂ ಅವರಿಗೆ ಲುಕ್​​ಔಟ್​ ನೋಟಿಸ್ ಜಾರಿಯಾಗಿತ್ತು. ನೆನ್ನೆ ದೆಹಲಿ ಹೈಕೋರ್ಟ್​ಗೆ ಚಿದಂಬರಂ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತಗೊಂಡ ಬಳಿಕ ಇ.ಡಿ.ಮತ್ತು ಸಿಬಿಐ ಅಧಿಕಾರಿಗಳು ಚಿದಂಬರಂ ಮೇಲೆ ದಾಳಿ ನಡೆಸಿದರು. ಆದರೆ, ಚಿದಂಬರಂ ಈ ವೇಳೆ ತಲೆಮರೆಸಿಕೊಂಡಿದ್ದರು.

ಚಿದಂಬರಂ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿರುವುದನ್ನು ಮನಗಂಡ ಸಿಬಿಯ ಮತ್ತು ಇಡಿ ಅಧಿಕಾರಿಗಳು, ಕಾಂಗ್ರೆಸ್ ಕಚೇರಿಗೆ ಆಗಮಿಸಿದಾಗ ಕಾರ್ಯಕರ್ತರ ಬೃಹತ್ ಪಡೆ ಅವರನ್ನು ತಡೆಯಿತು.

ಬಳಿಕ ಚಿದಂಬರಂ ಕಚೇರಿಯಿಂದ ನಿರ್ಗಮಿಸಿದ ಕುರಿತು ಮಾಹಿತಿ ಪಡೆದ ಅಧಿಕಾರಿಗಳು, ನೇರವಾಗಿ ಚಿದು ಮನೆಗೆ ಲಗ್ಗೆ ಇಟ್ಟರು. ಅಲ್ಲದೇ ಒತ್ತಾಯಪೂರ್ವಕವಾಗಿ ಮನೆಯ ಗೇಟ್’ನ್ನು ತೆರೆದು ಒಳ ನುಗ್ಗಿದರು.

ಬಳಿಕ ಬಿಗಿ ಭದ್ರತೆಯಲ್ಲಿ ಕೇಂದ್ರದ ಮಾಜಿ ಸಚಿವರನ್ನು ಸಿಬಿಐ ಕಚೇರಿಗೆ ಕರೆದೊಯ್ಯಲಾಯಿತು.ಇಂದು ಸುಪ್ರೀಂಕೋರ್ಟ್​ಗೆ ನಿರೀಕ್ಷಣಾ ಜಾಮೀನಿಗೆ ಚಿದಂಬರಂ ಪರ ವಕೀಲ ಕಪಿಲ್ ಸಿಬಾಲ್ ಅರ್ಜಿ ಸಲ್ಲಿಸಿದ್ದರು ವಿಚಾರಣೆಯನ್ನು ನ್ಯಾಯಾಲಯ ಶುಕ್ರವಾರಕ್ಕೆ ಮುಂದೂಡಿತು. ತಲೆಮರೆಸಿಕೊಂಡಿದ್ದ ಪಿ.ಚಿದಂಬರಂ ಬುಧವಾರ ರಾತ್ರಿ ದಿಢೀರ್​ ಎಂದು ಎಐಸಿಸಿ ಕಚೇರಿಯಲ್ಲಿ ಪ್ರತ್ಯಕ್ಷರಾಗಿ ಸುದ್ದಿಗೋಷ್ಠಿ ನಡೆಸಿದರು.

ಚಿದಂಬರಂ ಬರುವ ಸುಳಿವು ತಿಳಿದಿದ್ದ ಸಿಬಿಐ ಅಧಿಕಾರಿಗಳು ಕಾಂಗ್ರೆಸ್​ ಕಚೇರಿಗೂ ಬಂದಿದ್ದರು. ಆದರೆ, ಅಲ್ಲಿ ಅವರನ್ನು ಬಂಧಿಸಲಿಲ್ಲ. ಸುದ್ದಿಗೋಷ್ಠಿ ಬಳಿಕ ಚಿದಂಬರಂ ವಕೀಲರಾದ ಕಪಿಲ್ ಸಿಬಾಲ್ ಮತ್ತು ಅಭಿಷೇಕ್​ ಸಿಂಘ್ವಿ ಜೊತೆಗೆ ಜೋರ್​ ಬಾಗ್​ನಲ್ಲಿರುವ ತಮ್ಮ ನಿವಾಸಕ್ಕೆ ತೆರಳಿದರು.

ಬಳಿಕ ಇ.ಡಿ. ಮತ್ತು ಸಿಬಿಐ ಅಧಿಕಾರಿಗಳು ಕೂಡ ಚಿದಂಬರಂ ನಿವಾಸದ ಮುಂದೆ ಜಮಾಯಿಸಿದರು. ಆದರೆ, ಮನೆಗೆ ಗೇಟ್​ಗಳನ್ನು ತೆರೆಯದಿದ್ದಾಗ ಅಧಿಕಾರಿಗಳು ಕಾಂಪೌಂಡ್​ ಜಿಗಿದು ಮನೆಯೊಳಗೆ ಹೋದರು. ಆ ಬಳಿಕ ಚಿದಂಬರಂನನ್ನು ವಶಕ್ಕೆ ಪಡೆದರು.

ಇದಕ್ಕೂ ಮುನ್ನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದ ಚಿದಂಬರಂ, ತಮ್ಮ ವಿರುದ್ಧ ಕೇಳಿಬಂದಿದ್ದ ಕಾನೂನಿನಿಂದ ಕಣ್ತಪ್ಪಿಸಿಕೊಂಡಿರುವ ಆರೋಪವನ್ನು ಅಲ್ಲಗಳೆದಿದ್ದಾರೆ. “ನಾನು ಕಾನೂನಿನಿಂದ ತಲೆಮರೆಸಿಕೊಂಡಿರಲಿಲ್ಲ. ಆದರೆ ಕಾನೂನಿನಿಂದ ರಕ್ಷಣೆ ಪಡೆಯಲು ಮುಂದಾಗಿದ್ದೆ ಎಂದು ಹೇಳಿದ್ದರು. ಚಿದಂಬರಂ ಗೆ ಬಂಧನದಿಂದ ರಕ್ಷಣೆ ನೀಡುವುದಕ್ಕೆ ನಿರಾಕರಿಸಿದ್ದ ಸುಪ್ರೀಂ ಕೋರ್ಟ್ ನ ಎನ್ ವಿ ರಮಣ ನೇತೃತ್ವದ ಪೀಠ, ಅರ್ಜಿಯ ತುರ್ತು ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆ ಮಾಡಿತ್ತು.

ಶುಕ್ರವಾರ ಅರ್ಜಿ ವಿಚಾರಣೆ
ಐಎನ್‌ಎಕ್ಸ್ ಮೀಡಿಯಾ ಹಗರಣ ಸಂಬಂಧ ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ಸಲ್ಲಿಸಿರುವ ನಿರೀಕ್ಷಣಾ ಜಾಮೀಜು ಮೇಲ್ಮನವಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಶುಕ್ರವಾರ ವಿಚಾರಣೆ ನಡೆಸುವುದಾಗಿ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಎನ್.ವಿ.ರಮಣ, ಎಂ.ಶಾಂತನಗೌಡರ್ ಮತ್ತು ಅಜಯ್ ರಷ್ಟೋಗಿ ಅವರನ್ನೊಳಗೊಂಡ ವಿಭಾಗೀಯ ಪೀಠ ಮೇಲ್ಮನವಿಯನ್ನು ತುರ್ತು ವಿಚಾರಣಾ ಪಟ್ಟಿಗೆ ಸೇರ್ಪಡೆ ಮಾಡದ ಹೊರತು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಚಿದಂಬರಂ ಪರವಾಗಿ ವಾದ ಮಂಡಿಸಲು ಪೀಠದ ಮುಂದೆ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ತ್ವರಿತವಾಗಿ ವಿಚಾರಣೆಯನ್ನು ಕೈಗೆತ್ತಿಕೊಳ್ಳುವಂತೆ ಪದೇಪದೆ ಮನವಿ ಮಾಡಿದರು.

ಮೇಲ್ಮನವಿಯಲ್ಲಿ ಕೆಲವು ದೋಷಗಳಿದ್ದು, ನೋಂದಣಿ ಪುಸ್ತಕದಲ್ಲಿ ಈ ಗ್ಗೆ ಮಾಹಿತಿ ನೀಡಲಾಗಿದೆ ಎಂದು ವಿಭಾಗೀಯ ಪೀಠ, ಕಪಿಲ್ ಸಿಬಲ್ ಅವರಿಗೆ ತಿಳಿಸಿತು.

ಮನವಿಯಲ್ಲಿನ ದೋಷಗಳನ್ನು ಈಗ ತಾನೇ ಸರಿಪಡಿಸಲಾಗಿದೆ. ಇಂದೇ ವಿಚಾರಣೆ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿತು.

ಚಿದಂಬರಂ ಸಲ್ಲಿಸಿರುವ ಮನವಿ ಕುರಿತು ವಿಚಾರಣೆ ಕೈಗೆತ್ತಿಕೊಳ್ಳುವುದಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತೀವ್ರವಾಗಿ ವಿರೋಧಿಸಿದರು.

ನಂತರ ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿರುವ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಪಿ ಚಿದಂಬರಂ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಶುಕ್ರವಾರ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು.

ಕಳೆದ 24 ಗಂಟೆಯಿಂದ ಕಣ್ಮರೆಯಾಗಿದ್ದ ಚಿದಂಬರಂ ಇಂದು ಸಂಜೆ ಎಐಸಿಸಿ ಪ್ರಧಾನ ಕಚೇರಿಗೆ ಆಗಮಿಸಿ ಸುದ್ದಿಗೋಷ್ಠಿ ನಡೆಸಿ ಮನೆಗೆ ತೆರಳಿದ್ದರು. ಅವರನ್ನು ಬಂಧಿಸಲೆಂದು ಇ.ಡಿ. ಹಾಗೂ ಸಿಬಿಐ ಅಧಿಕಾರಿಗಳು ಕೂಡ ಅಲ್ಲಿಗೆ ಹೋಗಿದ್ದರು. ಅಲ್ಲದೆ ದೆಹಲಿ ಪೊಲೀಸರೂ ಕೂಡ ಸ್ಥಳಕ್ಕೆ ಆಗಮಿಸಿದ್ದರು. ಚಿದಂಬರಂ ನಿವಾಸದ ಎದುರು ಕೂಡ ಒಂದು ಗಂಟೆಗಳ ಕಾಲ ಹೈಡ್ರಾಮಾ ನಡೆದಿತ್ತು.

ಏನಿದು ಹಗರಣ?
2007ರಲ್ಲಿ ಹಣಕಾಸು ಸಚಿವರಾಗಿದ್ದ ಚಿದಂಬರಂ, ನಿಯಮ ಮೀರಿ ಐಎನ್​ಎಕ್ಸ್ ಮೀಡಿಯಾ ಸಮೂಹದಲ್ಲಿ 305 ಕೋಟಿ ರೂಪಾಯಿ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ (ಎಫ್​ಐಪಿಬಿ) ಮೂಲಕ ಅನುವು ಮಾಡಿಕೊಟ್ಟಿದ್ದರು. ಐಎನ್​ಎಕ್ಸ್ ಮೀಡಿಯಾ ಪರ ಲಾಬಿ ಮಾಡಿದ ಚಿದಂಬರಂ ಪುತ್ರ ಕಾರ್ತಿಗೆ ಇದಕ್ಕೆ ತಕ್ಕ ಪ್ರತಿಫಲ ಸಂದಾಯವಾಯಿತು ಎಂಬುದು ಪ್ರಕರಣ ತಿರುಳು.

ಐಎನ್​ಎಕ್ಸ್ ಮೀಡಿಯಾಕ್ಕೆ ಹಣ ವರ್ಗಾಯಿಸಲಾದ ಕಂಪನಿಗಳು ಚಿದಂಬರಂ ಪುತ್ರ ಕಾರ್ತಿ ನೇರವಾಗಿ ಅಥವಾ ಪರೋಕ್ಷವಾಗಿ ನಿಯಂತ್ರಣ ಹೊಂದಿದ ಕಂಪನಿಗಳಾಗಿವೆ ಎಂದು ಸಿಬಿಐ ಮತ್ತು ಇಡಿ ಆರೋಪಿಸಿವೆ. ಆದರೆ ಈ ವಿಷಯದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ.

ರಾಜಕೀಯ ಕಾರಣಗಳಿಗಾಗಿ ಬಿಜೆಪಿ ಸರ್ಕಾರ ತಮ್ಮನ್ನು ಗುರಿಯಾಗಿಸುತ್ತಿದೆ ಎಂದು ಚಿದಂಬರಂ ಆಪಾದಿಸಿದ್ದಾರೆ. ಐಎನ್​ಎಕ್ಸ್ ಮೀಡಿಯಾದ ಮಾಲಿಕರಾದ ಪೀಟರ್ ಮತ್ತು ಇಂದ್ರಾಣಿ ಮುಖರ್ಜಿ ಚಿದಂಬರಂ ಮತ್ತು ಕಾರ್ತಿ ಅವರ ಹೆಸರನ್ನು ನಮೂದಿಸಿದ್ದರು. ಇಂದ್ರಾಣಿಯ ಮಗಳು ಶೀನಾ ಬೋರಾ ಕೊಲೆ ಪ್ರಕರಣದ ಸಂಬಂಧ ಪೀಟರ್ ಮತ್ತು ಇಂದ್ರಾಣಿ ಇಬ್ಬರೂ ಈಗ ಜೈಲಿನಲ್ಲಿದ್ದಾರೆ…..

9.25pm…..ಕೊನೆಗೂ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅರೆಸ್ಟ್. ಮನೆಯ Compound ಹಾರಿ CBI ಹಾಗೂ ED ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ