ಪಿ.ಚಿದಂಬರಂ ಮನೆಗೆ ನೋಟಿಸ್ ಅಂಟಿಸಿದ ಸಿಬಿಐ ಅಧಿಕಾರಿಗಳು

ನವದೆಹಲಿ, ಆ.21- ಐಎನ್‍ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕೇಂದ್ರ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಚಿದಂಬರಂ ಅವರ ದೆಹಲಿ ನಿವಾಸದ ಮೇಲೆ ಮತ್ತೆ ಸಿಬಿಐ ಅಧಿಕಾರಿಗಳು ಇಂದು ಮುಂಜಾನೆ ತೆರಳಿ ಅವರ ಅನುಪಸ್ಥಿತಿಯಲ್ಲಿ ಮನೆಗೆ ನೋಟಿಸ್ ಅಂಟಿಸಿ ಹಿಂದಿರುಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ನಿನ್ನೆ ಸಿಬಿಐ ಅಧಿಕಾರಿಗಳು ದೆಹಲಿ ನಿವಾಸದ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಚಿದಂಬರಂ ನಾಪತ್ತೆಯಾಗಿದ್ದರು. ಇದೀಗ ಇಂದು ನಸುಕಿನಲ್ಲಿ ಮತ್ತೆ ಅಧಿಕಾರಿಗಳು ಚಿದಂಬರಂ ಅವರ ದೆಹಲಿ ನಿವಾಸಕ್ಕೆ ಆಗಮಿಸಿ, ಶೋಧ ನಡೆಸಿದರು. ಚಿದಂಬರಂ ಮನೆಯಲ್ಲಿ ಇಲ್ಲದ ಕಾರಣ ಕೋರ್ಟ್ ನೋಟಿಸ್ ಸೇರಿದಂತೆ ಇತರ ವಿವರಗಳ ಪ್ರತಿಯನ್ನು ಸಿಬಿಐ ಅಧಿಕಾರಿ ಮನೆಗೆ ನೋಟಿಸ್ ಅಂಟಿಸಿದ್ದಾರೆ.

ನಿನ್ನೆ ದೆಹಲಿ ಹೈ ಕೋರ್ಟ್ ಪಿ.ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸುತ್ತಿದ್ದಂತೆಯೇ ಇಡಿ (ಜಾರಿ ನಿರ್ದೇಶನಾಲಯ) ಮತ್ತು ಸಿಬಿಐ ಅಧಿಕಾರಿಗಳು ಚಿದಂಬರಂ ಅವರ ಮನೆಗೆ ಬಂದಿದ್ದರು. ಆದರೆ ಚಿದಂಬರಂ ಅಲ್ಲಿ ಇರಲಿಲ್ಲ. 6.30ಕ್ಕೆ ಮನೆಗೆ ಬಂದ ಅಧಿಕಾರಿಗಳು 10 ನಿಮಿಷಗಳ ನಂತರ ಅಲ್ಲಿಂದ ವಾಪಸ್ ತೆರಳಿದ್ದಾರೆ. ಸಿಬಿಐ ಅಧಿಕಾರಿಗಳು ಬಂದು ಹೋದ ಬೆನ್ನಲ್ಲೇ 7.30ರ ಸುಮಾರಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳೂ ಸಹ ಚಿದಂಬರಂ ಮನೆಗೆ ಬಂದಿದ್ದಾರೆ.

ಐಎನ್‍ಎಕ್ಸ್ ಮೀಡಿಯಾ ಭ್ರಷ್ಟಾಚಾರ ಹಾಗೂ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಚಿದಂಬರಂ ಅವರ ವಿರುದ್ಧ ಸಿಬಿಐ ಎಫ್‍ಐಆರ್ ದಾಖಲಿಸಿಕೊಂಡಿದೆ. ದೆಹಲಿ ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸುತ್ತಿದ್ದಂತೆಯೇ ಚಿದಂಬರಂ ಬಂಧನದಿಂದ ರಕ್ಷಣೆ ಪಡೆಯುವುದಕ್ಕಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ