ಬೆಂಗಳೂರು, ಆ.21- ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಹಿರಿಯ ಶಾಸಕ ಉಮೇಶ್ ಕತ್ತಿ ಅವರು ಇಂದು ಸೆವೆನ್ ಮಿನಸ್ಟರ್ ಕ್ವಾಟ್ರರ್ಸ್ನಲ್ಲಿ ಬೆಳಗಾವಿ ಜಿಲ್ಲೆಯ ಬಿಜೆಪಿ ಶಾಸಕರುಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಎರಡನೆ ಹಂತದಲ್ಲೂ ಅವಕಾಶ ಸಿಗದೆ ಹೋದರೆ ರಾಜೀನಾಮೆ ಕೊಟ್ಟು ಮನೆ ಕಡೆ ಹೋಗುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ಉಮೇಶ್ ಕತ್ತಿ ಅವರ ಸಹೋದರ ರಮೇಶ್ ಕತ್ತಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ಈಗ ಸಚಿವ ಸ್ಥಾನವನ್ನು ನಿರಾಕರಿಸಿರುವುದರಿಂದ ತೀವ್ರ ಅಸಮಾಧಾನಗೊಂಡಿರುವ ಅವರು ತಮ್ಮ ಆಪ್ತ ಶಾಸಕರುಗಳ ಜತೆ ಸಭೆ ನಡೆಸಿದ್ದಾರೆ.
ಒಂದು ಹಂತದಲ್ಲಿ ಅವರು ನನ್ನ ನಡೆ ಮನೆಯ ಕಡೆಗೆ ಎಂದು ಹೇಳುವ ಮೂಲಕ ರಾಜೀನಾಮೆಯ ಬೆದರಿಕೆಯನ್ನು ಒಡ್ಡಿದ್ದಾರೆ. ಇದೇ ವೇಳೆ ಜೆಡಿಎಸ್ನ ಬಸವರಾಜ್ ಹೊರಟ್ಟಿ ಅವರು ಉಮೇಶ್ ಕತ್ತಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು , ಮರಳಿ ಮನೆಗೆ ಬರುವಂತೆ ಆಹ್ವಾನ ನೀಡಿದ್ದಾರೆ.
ಈ ಮೊದಲು ಉಮೇಶ್ ಕತ್ತಿ ಜೆಡಿಎಸ್ನಲ್ಲಿದ್ದರು.ರಾಜಕೀಯ ಬೆಳವಣಿಗೆಗಳಲ್ಲಿ ಬಿಜೆಪಿ ಸೇರಿದರು. ಪ್ರಸ್ತುತ ಸಂಪುಟ ವಿಸ್ತರಣೆ ನಂತರ ಸೃಷ್ಟಿಯಾಗಿರುವ ಅಸಮಾಧಾನದ ಲಾಭ ಪಡೆಯಲು ಹವಣಿಸುತ್ತಿರುವ ಜೆಡಿಎಸ್ ಅತೃಪ್ತರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದೆ.
ಉಮೇಶ್ ಕತ್ತಿ ಅವರನ್ನು ಮತ್ತೆ ಜೆಡಿಎಸ್ ಸೇರುವಂತೆ ಆಹ್ವಾನ ನೀಡಿರುವುದು ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ.