ಮುಂಬೈ, ಆ.21- ದೌರ್ಜನ್ಯ ಮತ್ತು ಒಳಸಂಚಿನಿಂದ ತಮ್ಮ ಸಂಸ್ಥೆಗೆ ಬಾರಿ ನಷ್ಟ ಉಂಟು ಮಾಡಿ ಕಿರುಕುಳ ನೀಡಿರುವ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಮತ್ತು ಇನ್ನಿಬ್ಬರು ಉನ್ನತ ಅಧಿಕಾರಿಗಳ ವಿರುದ್ಧ 63 ಮೂನ್ಸ್ ಸಂಸ್ಥೆ 10ಸಾವಿರ ಕೋಟಿ ರೂ.ಗಳ ನಷ್ಟ ಪರಿಹಾರ ಕೋರಿ ಹೂಡಿರುವ ದಾವೆ ಮತ್ತೆ ವಿಚಾರಣೆ ಹಾದಿಯಲ್ಲಿದೆ.
ಈ ಸಂಬಂಧ ಬಾಂಬೆ ಹೈಕೋರ್ಟ್ ಈಗಾಗಲೇ ಪಿ.ಚಿದಂಬರಂ, ಕೌಶಲ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಕೆ.ಪಿ.ಕೃಷ್ಣನ್ ಮತ್ತು ಪಾವರ್ಡ್ ಮಾರ್ಕೆಟ್ಸ್ ಕಮಿಷನ್ (ಎಫ್‍ಎಮ್‍ಸಿ) ಅಧ್ಯಕ್ಷ ರಮೇಶ್ ಅಭಿಷೇಕ್ ಅವರಿಗೆ ಸಮನ್ಸ್ ಜಾರಿಗೊಳಿಸಿದೆ.
ಇದರಿಂದ ಚಿದುಗೆ ಮತ್ತೊಂದು ಕಾನೂನು ಕಂಟಕ ಎದುರಾಗಿದೆ.ಈಗಾಗಲೇ ಐಎನ್‍ಎಕ್ಸ್ ಮೀಡಿಯಾ, ಏರ್‍ಸೆಲ್ ಮ್ಯಾಕ್ಸ್ ಮತ್ತಿತರರ ಪ್ರಕರಣಗಳಲ್ಲಿ ಆರೋಪಕ್ಕೆ ಗುರಿಯಾಗಿ ಕಾನೂನು ಸಂಕಷ್ಟದಲ್ಲಿ ಸಿಲುಕಿರುವ ಚಿದು ಈಗ 63ಮೂನ್ಸ್ ಸಂಸ್ಥೆಯ ಹೂಡಿರುವ ದಾವೆಯನ್ನು ಎದುರಿಸುವಂತಾಗಿದೆ.
ಚಿದು ಪರ ವಕೀಲ ನೀತೀಶ್ ಜೈನ್ ಹೈಕೋರ್ಟ್‍ಗೆ ಮನವಿ ಮಾಡಿ. ತಮ್ಮ ಕಕ್ಷಿದಾರರಿಗೆ ಸಮನ್ಸ್ ಕಳುಹಿಸಲಾಗಿದೆ. ಆದರೆ ಸಂಸ್ಥೆಯ ದಾವೆಯಲ್ಲಿರುವ ಅಂಶಗಳು, ವಾದ-ಪತ್ರದ ವಿವರ ಮತ್ತು ಇತರ ದಾಖಲೆಗಳ ಪ್ರತಿಗಳು ಲಭ್ಯವಾಗಿಲ್ಲ ಆದ್ದರಿಂದ ಈ ಪ್ರತಿಗಳನ್ನು ನೀಡುವಂತೆ ಮನವಿ ಮಾಡಿದೆ.
ಅಕ್ಟೋಬರ್ 15ರೊಳಗೆ ಈ ಪ್ರಕರಣದ ವಿಚಾರಣೆಗಾಗಿ ಖುದ್ದಾಗಿ ಅಥವಾ ವಕೀಲರ ಮೂಲಕ ಕೋರ್ಟ್‍ಗೆ ಹಾಜರಾಗುವಂತೆ ಚಿದು,ಕೃಷ್ಣನ್ ಮತ್ತು ಅಭಿಷೇಕ್ ಅವರಿಗೆ ನ್ಯಾಯಾಲಯ ಸೂಚಿಸಿದೆ.
ಚಿದಂಬರಂ ಅವರು ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಈ ಇಬ್ಬರು ಉನ್ನತ ಅಧಿಕಾರಿಗಳ ಮೂಲಕ ತಮ್ಮ ಸಂಸ್ಥೆಯನ್ನು ಗುರಿಯಾಗಿಟ್ಟುಕೊಂಡು ಉದ್ದೇಶಪೂರಕವಾಗಿ ಆರೋಪಗಳನ್ನು ಮಾಡಿ ಕಿರುಕುಳವನ್ನು ನೀಡಿ ಬಾರಿ ನಷ್ಟಕ್ಕೆ ಕಾರಣವಾಗಿದ್ದಾರೆ ಎಂದು ಸಂಸ್ಥೆ ಆರೋಪಿಸಿದೆ.