ಬೆಂಗಳೂರು, ಆ.20- ನೂತನ ಸಚಿವ ಸಂಪುಟ ವಿಸ್ತರಣೆ ಸಮಾರಂಭಕ್ಕೆ ಕೆಲವು ಶಾಸಕರು ಗೈರು ಹಾಜರಾಗುವ ಮೂಲಕ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ.
ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ಆತ್ಮವಿಶ್ವಾಸವಿಟ್ಟುಕೊಂಡಿದ್ದ ಕೆಲವು ಶಾಸಕರು ಇಂದಿನ ಸಮಾರಂಭಕ್ಕೆ ಆಗಮಿಸಿರಲಿಲ್ಲ. ಈ ಮೂಲಕ ತಮಗೆ ಅಸಮಾಧಾನವಿದೆ ಎಂಬುದನ್ನು ಖಚಿತಪಡಿಸಿದ್ದಾರೆ.
ಶಾಸಕರಾದ ಮುರುಗೇಶ್‍ನಿರಾಣಿ, ಎಂ.ಪಿ.ರೇಣುಕಾಚಾರ್ಯ, ಬಸವರಾಜಪಾಟೀಲ್ ಯತ್ನಾಳ್, ಬಾಲಚಂದ್ರ ಜಾರಕಿಹೊಳಿ, ಅಭಯ್‍ಪಾಟೀಲ್, ತಿಪ್ಪಾರೆಡ್ಡಿ, ಸುನೀಲ್‍ಕುಮಾರ್, ಸಿ.ಎಂ.ಉದಾಸಿ,ಉಮೇಶ್‍ಕತ್ತಿ, ಎಸ್.ಎ.ರವೀಂದ್ರನಾಥ್ ಸೇರಿದಂತೆ ಮತ್ತಿತರರು ಗೈರು ಹಾಜರಾಗಿದ್ದರು.
ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆ ಸೂಳ್ಯಾದಿಂದ ಸತತ ಆರು ಬಾರಿ ಗೆದ್ದಿರುವ ಎಸ್.ಅಂಗಾರ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದರು.
ನಾನು ಆರು ಬಾರಿ ಗೆದ್ದಿದ್ದೆ. ಜಿಲ್ಲೆಯ ಜನತೆ ನಾನು ಮಂತ್ರಿಯಾಗುತ್ತೇನೆಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಅಸಮಾಧಾನವಿದೆ. ಆದರೆ, ಪಕ್ಷ ನಿಷ್ಟೆಯನ್ನು ಬದಲಾಯಿಸುವುದಿಲ್ಲ ಎಂದು ಅಂಗಾರ ಸ್ಪಷ್ಟಪಡಿಸಿದರು.
ಇನ್ನು ಸಿಎಂ ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದ ಉಮೇಶ್ ಕತ್ತಿ, ಮುರುಗೇಶ್‍ನಿರಾಣಿ, ರೇಣುಕಾಚಾರ್ಯ ಕೂಡ ಸಮಾರಂಭದಿಂದ ದೂರ ಉಳಿದಿದ್ದರು.
ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಎಲ್ಲರೂ ಬರಬೇಕೆಂದು ಖುದ್ದು ಮುಖ್ಯಮಂತ್ರಿಯವರೇ ಆಹ್ವಾನಿಸಿದ್ದರು. ಆದರೆ, ಕೊನೆಕ್ಷಣದಲ್ಲಿ ಪಟ್ಟಿಯಿಂದ ತಮ್ಮ ಹೆಸರು ಬಿಟ್ಟು ಹೋಗಿದ್ದರಿಂದ ಅಸಮಾಧಾನಗೊಂಡ ಸಚಿವಾಕಾಂಕ್ಷಿಗಳು ಸಮಾರಂಭದಿಂದ ದೂರ ಉಳಿದಿದ್ದರು.
ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ದೆಹಲಿಯಲ್ಲಿ ನಿರ್ಧಾರವಾಗಿರುವುದರಿಂದ ಯಾರೊಬ್ಬರೂ ಬಹಿರಂಗವಾಗಿ ಅಸಮಾಧಾನವನ್ನು ಹೊರ ಹಾಕುತ್ತಿಲ್ಲ. ಮನಸ್ಸಿನಲ್ಲಿ ಸಾಕಷ್ಟು ಕೋಪ, ತಾಪ, ಬೇಸರ ಇದ್ದರೂ ಕೂಡ ವರಿಷ್ಠರ ಸೂಚನೆಯನ್ನು ಪಾಲನೆ ಮಾಡಬೇಕಾಗಿರುವುದರಿಂದ ವಲ್ಲದ ಮನಸ್ಸಿನಿಂದಲೇ ಒಳಗೊಳಗೆ ಕೈ ಕೈ ಹಿಸಿಕಿಕೊಳ್ಳುತ್ತಿದ್ದಾರೆ. ಉಗಳಲೂ ಆಗದ, ನುಂಗಲೂ ಆಗದ ಇಕ್ಕಟ್ಟಿನ ಸ್ಥಿತಿ ಅಸಮಾಧಾನರದ್ದು.
ಎಲ್ಲವೂ ದೆಹಲಿಯಲ್ಲೇ ತೀರ್ಮಾನವಾಗಿರುವುದರಿಂದ ನಾನೂ ಕೂಡ ಏನು ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಯಡಿಯೂರಪ್ಪ ಕೈ ಚೆಲ್ಲಿದ್ದಾರೆ. ಹೀಗಾಗಿ ಬಿಜೆಪಿಯೊಳಗಿನ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿದೆ.






