ಬೆಂಗಳೂರು, ಆ.20- ಇಂದು ವಿಸ್ತರಣೆಯಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಂಪುಟದಲ್ಲಿ 13 ಜಿಲ್ಲೆಗಳಿಗೆ ಆದ್ಯತೆ ನೀಡಲಾಗಿದ್ದು, 17 ಜಿಲ್ಲೆಗಳು ಸಂಪುಟದ ಪ್ರಾತಿನಿಧ್ಯದಿಂದ ಹೊರಗುಳಿದಿವೆ.
ರಾಜಧಾನಿ ಬೆಂಗಳೂರಿಗೆ ಸಿಂಹಪಾಲು(4) ಸಿಕ್ಕಿದ್ದರೆ, ಮುಖ್ಯಮಂತ್ರಿ ಯಡಿಯೂರಪ್ಪನವರ ತವರು ಜಿಲ್ಲೆ ಶಿವಮೊಗ್ಗಕ್ಕೆ 2, ಬೆಳಗಾವಿಗೆ 2 ಸಚಿವ ಸ್ಥಾನವನ್ನು ನೀಡಲಾಗಿದೆ.
ಉಳಿದಂತೆ ಬಾಗಲಕೋಟೆ, ಬೀದರ್, ಗದಗ, ಧಾರವಾಡ, ಹಾವೇರಿ, ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು, ದಕ್ಷಿಣಕನ್ನಡ, ಕೋಲಾರ, ಜಿಲ್ಲೆಗಳಿಗೆ ತಲಾ ಒಂದು ಸಚಿವ ಸ್ಥಾನ ಸಿಕ್ಕಿದೆ.
ವಿಜಯಪುರ, ಯಾದಗಿರಿ, ಕಲಬುರಗಿ, ರಾಯಚೂರು, ಕೊಪ್ಪಳ, ಉತ್ತರಕನ್ನಡ, ಬಳ್ಳಾರಿ, ದಾವಣಗೆರೆ, ಹಾಸನ, ಉಡುಪಿ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಶಾಸಕರುಗಳಿದ್ದರೂ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ.
ಕೋಲಾರದಲ್ಲಿ ಬಿಜೆಪಿ ಶಾಸಕರಿಲ್ಲದೆ ಇದ್ದರೂ ಬಿಜೆಪಿ ಬೆಂಬಲಿಸಿದ ಪಕ್ಷೇತರ ಶಾಸಕ ಎಚ್.ನಾಗೇಶ್ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಂತಾಗಿದೆ.
ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬಿಜೆಪಿ ಶಾಸಕರುಗಳು ಇಲ್ಲದೆ ಇರುವುದರಿಂದ ಅವಕಾಶ ಸಿಕ್ಕಿಲ್ಲ.
ಮುಂದಿನ ದಿನಗಳಲ್ಲಿ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಮೊದಲ ಹಂತದಲ್ಲಿ ಯಾವ ಜಿಲ್ಲೆಗಳು ವಂಚಿತವಾಗಿವೆಯೋ ಅಂತಹ ಜಿಲ್ಲೆಗಳಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಯ 10 ಮಂದಿ ಶಾಸಕರಿದ್ದು, ಅವರಲ್ಲಿ ನಿಪ್ಪಾಣಿ ಕ್ಷೇತ್ರದ ಶಶಿಕಲಾ ಜೊಲ್ಲೆ ಮತ್ತು ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಹೇಶ್ ಕುಮಟಳ್ಳಿ ವಿರುದ್ಧ ಸೋಲು ಕಂಡಿದ್ದ ಮಾಜಿ ಸಚಿವ ಲಕ್ಷ್ಮಣ್ ಸವದಿ ಅವರಿಗೆ ಸಂಪುಟದಲ್ಲಿ ಅವಕಾಶ ನೀಡಲಾಗಿದೆ. ಜಿಲ್ಲೆಯ ಉಮೇಶ್ಕತ್ತಿ, ಬಾಲಚಂದ್ರಜಾರಕಿಹೊಳಿ ಪ್ರಭಾವಿ ನಾಯಕರಾಗಿದ್ದು, ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದರು. ಆದರೆ ಅವರಿಗೆ ಅವಕಾಶ ಸಿಕ್ಕಿಲ್ಲ.
ಬಾಗಲಕೋಟೆ ಜಿಲ್ಲೆಯಲ್ಲಿ 5 ಮಂದಿ ಬಿಜೆಪಿ ಶಾಸಕರಿದ್ದು, ಮುಧೋಳ ಮೀಸಲು ಕ್ಷೇತ್ರದ ಗೋವಿಂದ ಕಾರಜೋಳ ಅವರಿಗೆ ಮಾತ್ರ ಅವಕಾಶ ಸಿಕ್ಕಿದೆ. ಉಳಿದಂತೆ ಸಿದ್ದು ಸವದಿ, ಮುರುಗೇಶ್ ನಿರಾಣಿ ಅವರು ಆಕಾಂಕ್ಷಿಗಳಾಗಿದ್ದರೂ, ಅವಕಾಶ ವಂಚಿತರಾಗಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಎ.ಎಸ್.ಪಾಟೀಲ್ ನಡಹಳ್ಳಿ, ಬಸವನಗೌಡ ಪಾಟೀಲ್ ಯತ್ನಾಳ್ ಅವರುಗಳು ಆಕಾಂಕ್ಷಿಗಳಾಗಿದ್ದರು.
ಯಾದಗಿರಿ ಜಿಲ್ಲೆಯಲ್ಲಿ ನರಸಿಂಹನಾಯಕ್ ಪ್ರಬಲ ಆಕಾಂಕ್ಷಿಯಾಗಿದ್ದರು. ಕಲಬುರಗಿ ಜಿಲ್ಲೆಯಲ್ಲಿ ನಾಲ್ಕು ಮಂದಿ ಶಾಸಕರಿದ್ದಾರೆ. ಸುಭಾಷ್ ಗುತ್ತೇದಾರ್, ದತ್ತಾತ್ರೇಯ ಪಾಟೀಲ್ ರೇವೂರ ಅವರುಗಳು ಪ್ರಬಲ ಆಕಾಂಕ್ಷಿಗಳಾಗಿದ್ದರು.
ಬೀದರ್ ಜಿಲ್ಲೆಯಲ್ಲಿ ಪ್ರಭು ಚೌಹಾಣ್ ಏಕೈಕ ಶಾಸಕರಾಗಿದ್ದು, ಅವರಿಗೆ ಸಂಪುಟದಲ್ಲಿ ಅವಕಾಶ ಸಿಕ್ಕಿದೆ.
ರಾಯಚೂರು ಜಿಲ್ಲೆಯಲ್ಲಿ ಇಬ್ಬರು ಬಿಜೆಪಿ ಶಾಸಕರಿದ್ದು, ಶಿವನಗೌಡನಾಯಕ್ ಪ್ರಬಲ ಆಕಾಂಕ್ಷಿಯಾಗಿದ್ದರು.
ಕೊಪ್ಪಳದಲ್ಲಿ ಮೂರು ಮಂದಿ ಶಾಸಕರಿದ್ದರಲ್ಲದೆ, ಪರಣ್ಣಮುನವಳ್ಳಿ ಪ್ರಬಲ ಆಕಾಂಕ್ಷಿಯಾಗಿದ್ದರು.
ಗದಗ ಜಿಲ್ಲೆಯಿಂದ ಸಿ.ಸಿ.ಪಾಟೀಲ್ ಅವರಿಗೆ ಅವಕಾಶ ಸಿಕ್ಕಿದೆ. ರಾಮಣ್ಣ ಲಮಾಣಿ, ಕಳಕಪ್ಪ ಬಂಡಿ ಅವಕಾಶವಂಚಿತರಾಗಿದ್ದಾರೆ.
ಧಾರವಾಡದಲ್ಲಿ ಐದು ಮಂದಿ ಪಕ್ಷದ ಶಾಸಕರಿದ್ದು, ಜಗದೀಶ್ ಶೆಟ್ಟರ್ ಅವರಿಗೆ ಮಾತ್ರ ಅವಕಾಶ ಸಿಕ್ಕಿದೆ. ಉತ್ತರ ಕನ್ನಡ ಜಿಲ್ಲೆಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸ್ಪೀಕರ್ ಸ್ಥಾನನೀಡಿರುವುದರಿಂದ ಜಿಲ್ಲೆಗೆ ಸಚಿವ ಸ್ಥಾನ ನೀಡಲಾಗಿಲ್ಲ.
ಹಾವೇರಿ ಜಿಲ್ಲೆಯಲ್ಲಿ ಹಿರಿಯ ನಾಯಕರಾದ ಸಿ.ಎಂ. ಉದಾಸಿಯವರನ್ನು ಹಿಂದಿಕ್ಕಿ ಬಸವರಾಜ ಬೊಮ್ಮಾಯಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ನಾಲ್ಕು ಮಂದಿ ಶಾಸಕರ ಪೈಕಿ ಜಿಲ್ಲೆಗೆ ಒಂದು ಸಚಿವ ಸ್ಥಾನ ಸಿಕ್ಕಿದೆ.
ಇದೇ ಮೊದಲ ಬಾರಿಗೆ ಬಳ್ಳಾರಿ ಜಿಲ್ಲೆ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನದಿಂದ ವಂಚಿತವಾಗಿದೆ. ಜಿಲ್ಲೆಯ ನಾಯಕರಾದ ಶ್ರೀರಾಮುಲು ಅವರು ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದಿಂದ ಆಯ್ಕೆಯಾಗಿದ್ದು, ಅವರಿಗೆ ಸಚಿವ ಸ್ಥಾನ ಸಿಕ್ಕಿದೆ. ಚಿತ್ರದುರ್ಗದಲ್ಲಿ 5 ಮಂದಿ ಬಿಜೆಪಿ ಶಾಸಕರಿದ್ದಾರೆ. ಪೂರ್ಣಿಮಾ ಶ್ರೀನಿವಾಸ್, ಗೂಳಿಹಟ್ಟಿ ಶೇಖರ್, ಜಿ.ಎಚ್.ತಿಪ್ಪಾರೆಡ್ಡಿ ಅವರುಗಳು ಸಂಪುಟದ ಪ್ರಬಲ ಆಕಾಂಕ್ಷಿಗಳಾಗಿದ್ದರು.
ದಾವಣಗೆರೆ ಜಿಲ್ಲೆಯಲ್ಲಿ ಕರುಣಾಕರರೆಡ್ಡಿ, ಎಸ್.ಎ.ರವೀಂದ್ರನಾಥ್, ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಆರು ಮಂದಿ ಶಾಸಕರಿದ್ದಾರೆ. ಆದರೆ ಯಾರಿಗೂ ಅವಕಾಶ ಸಿಕ್ಕಿಲ್ಲ.
ಶಿವಮೊಗ್ಗ ಜಿಲ್ಲೆಯಿಂದ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುವುದರಿಂದ ಕೆ.ಎಸ್.ಈಶ್ವರಪ್ಪ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ. ಆರು ಮಂದಿ ಶಾಸಕರ ಪೈಕಿ ಇಬ್ಬರಿಗೆ ಜಿಲ್ಲೆಯಿಂದ ಪ್ರಮುಖ ಸ್ಥಾನ ದೊರೆತಂತಾಗಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕರಾವಳಿ ಜಿಲ್ಲೆಗಳಿಂದ ಒಟ್ಟು 16 ಮಂದಿ ಶಾಸಕರಿದ್ದಾರೆ. ಯಾರಿಗೂ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ.
ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ಮಂದಿ ಶಾಸಕರ ಪೈಕಿ ಸಿ.ಟಿ.ರವಿ ಮಾತ್ರ ಅವಕಾಶ ಗಿಟ್ಟಿಸಿದ್ದಾರೆ.
ತುಮಕೂರು ಜಿಲ್ಲೆಯಿಂದ ಜೆ.ಸಿ.ಮಾಧುಸ್ವಾಮಿ, ಬೆಂಗಳೂರು ನಗರದಿಂದ ಡಾ.ಅಶ್ವತ್ಥನಾರಾಯಣ, ಸುರೇಶ್ಕುಮಾರ್, ವಿ.ಸೋಮಣ್ಣ, ಆರ್.ಅಶೋಕ್ ಸಚಿವರಾಗಿದ್ದಾರೆ.
ಕೊಡಗು ಜಿಲ್ಲೆಯ ಕೆ.ಜಿ.ಬೋಪಯ್ಯ, ಮೈಸೂರಿನ ರಾಮದಾಸ್ ಮತ್ತಿತರರು ಆಕಾಂಕ್ಷಿಗಳಾಗಿದ್ದರೂ ಮೊದಲ ಪಟ್ಟಿಯಲ್ಲಿ ಅವಕಾಶ ವಂಚಿತರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸಪೂಜಾರಿ, ಕೋಲಾರ ಜಿಲ್ಲೆಯ ಪಕ್ಷೇತರ ಶಾಸಕ ಎಚ್.ನಾಗೇಶ್ ಅವರು ಸಂಪುಟದಲ್ಲಿ ಅವಕಾಶ ಪಡೆದಿದ್ದಾರೆ.