ಬೆಂಗಳೂರು, ಆ.20- ಸಂಪುಟಕ್ಕೆ ಸೇರ್ಪಡೆಯಾದ ಬಹುತೇಕ ಸಚಿವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ. ವಿ.ಸೋಮಣ್ಣ ಮತ್ತು ಪ್ರಭುಚೌವ್ಹಾಣ್ ಮಾತ್ರ ಬಸವಾದಿ ಶರಣರು ಹಾಗೂ ಸಂತಸೇವಾಲಾಲ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಅದರಲ್ಲೂ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಜೆ.ಸಿ.ಮಾಧುಸ್ವಾಮಿ ಬಾಯಿ ತಪ್ಪಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದೇನೆ ಎಂದು ಹೇಳಿ ಪೇಚಿಗೆ ಸಿಲುಕಿದರು.
ಬಳಿಕ ತಮ್ಮ ಪ್ರಮಾದವನ್ನು ಸರಿಪಡಿಸಿಕೊಂಡು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದೇನೆ ಎಂದು ಹೇಳಿದರು.
ಗೋವಿಂದ ಕಾರಜೋಳ, ಸಿ.ಎಂ.ಅಶ್ವತ್ಥನಾರಾಯಣ, ಲಕ್ಷ್ಮಣಸವದಿ, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಜಗದೀಶ್ ಶೆಟ್ಟರ್, ಶ್ರೀರಾಮುಲು, ಎಸ್.ಸುರೇಶ್ಕುಮಾರ್, ಸಿ.ಟಿ.ರವಿ, ಬಸವರಾಜಬೊಮ್ಮಾಯಿ, ಕೋಟಾ ಶ್ರೀನಿವಾಸಪೂಜಾರಿ, ಜೆ.ಸಿ.ಮಾಧುಸ್ವಾಮಿ, ಸಿ.ಸಿ.ಪಾಟೀಲ್, ಎಚ್.ನಾಗೇಶ್ ಹಾಗೂ ಶಶಿಕಲಾ ಜೊಲ್ಲೆ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಗೋವಿಂದರಾಜನಗರದ ವಿ.ಸೋಮಣ್ಣ ಬಸವಾಧಿ ಶರಣರ ಹೆಸರಿನಲ್ಲಿ ಹಾಗೂ ಬೀದರ್ ಜಿಲ್ಲೆಯ ಔರಾದ್ನ ಪ್ರಭುಚೌವ್ಹಾಣ್ ಸಂತಸೇವಾಲಾಲ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇನ್ನು ಪ್ರಭು ಚೌವ್ಹಾಣ್ ಲಂಬಾಣಿ ಸಮುದಾಯದ ಉಡುಗೆ ತೊಟ್ಟಿದ್ದು, ಎಲ್ಲರನ್ನು ಆಕರ್ಷಿಸಿತ್ತು.
ಕೆಲವು ಸಚಿವರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಬಿ.ಎಸ್.ಯಡಿಯೂರಪ್ಪನವರ ಕಾಲಿಗೆ ನಮಸ್ಕರಿಸಿದರು.
ಇನ್ನು ಸಚಿವರ ಹೆಸರುಗಳನ್ನು ಸರ್ಕಾರದ ಮುಖ್ಯಕಾರ್ಯದರ್ಶಿ ಪ್ರಕಟಿಸುತ್ತಿದ್ದಂತೆ ಬೆಂಬಲಿಗರು, ಕಾರ್ಯಕರ್ತರು, ಅಭಿಮಾನಿಗಳು ಜೈಕಾರ, ಹರ್ಷೋದ್ಘಾರಗಳನ್ನು ಕೂಗಿ ಸಂಭ್ರಮಿಸಿದರು.