ಬೆಂಗಳೂರು, ಆ.20- ಕಾಂಗ್ರೆಸಿಗರು ಮಾಡಿದ ಯೋಜನೆಗಳನ್ನು ದೀಪ ಹಚ್ಚಿ ಉದ್ಘಾಟಿಸುವ ಮೂಲಕ ಬಿಜೆಪಿಯವರು ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ರಾಜೀವ್ಗಾಂಧಿ ಮತ್ತು ಡಿ.ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚಂದ್ರಯಾನ-1,2 ಉಪಗ್ರಹಗಳನ್ನು ಹಾರಿ ಬಿಡಲಾಗಿದೆ. ನೆಹರು, ಇಂದಿರಾಗಾಂಧಿ, ರಾಜೀವ್ಗಾಂಧಿ ಅವರು ವಿಜ್ಞಾನ, ತಂತ್ರಜ್ಞಾನಕ್ಕೆ ಒತ್ತು ಕೊಟ್ಟಿದ್ದರಿಂದ ಚಂದ್ರಯಾನ ಸಾಧ್ಯವಾಗಿದೆ ಎಂದರು.
ನಿನ್ನೆ -ಮೊನ್ನೆ ಬಂದ ಮೋದಿ, ಅಮಿತ್ ಶಾ ಅವರು ತಾವೇ ಮಾಡಿದ್ದು ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. 1974ರಲ್ಲಿ ಇಂದಿರಾಗಾಂಧಿ ಅವರು ಮೊದಲ ಬಾರಿಗೆ ಅಣುಪರೀಕ್ಷೆ ಮಾಡಿದ್ದರು. 125 ಕೋಟಿ ಜನರ ಪೈಕಿ ಶೇ.90ರಷ್ಟು ಜನರ ಕೈಯಲ್ಲಿ ಮೊಬೈಲ್ ಇದೆ. 145 ಕೋಟಿ ಸಂಪರ್ಕಗಳಿವೆ. ಇದಕ್ಕೆ ರಾಜೀವ್ಗಾಂಧಿ ಅವರ ದೂರ ಸಂಪರ್ಕ ಕ್ರಾಂತಿಯೇ ಕಾರಣ ಎಂದು ಹೇಳಿದರು.
ನಮ್ಮ ಮೊಬೈಲ್ಗಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿ ನಮ್ಮನ್ನೇ ಸೋಲಿಸಿದ್ದಾರೆ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಐಐಟಿ, ಐಐಎಂ, ಹೈವೇಗಳು, ಸಾರ್ವಜನಿಕ ಉದ್ದಿಮೆಗಳು, ಎಐಎಂಎಸ್ ಸೇರಿದಂತೆ ಹಲವಾರು ದೇಶ ಕಟ್ಟುವ ಕೆಲಸ ಮಾಡಿದ್ದು ಕಾಂಗ್ರೆಸ್.
ಮೋದಿ ಮತ್ತು ಅಮಿತ್ ಶಾ ಈ ದೇಶಕ್ಕಾಗಿ ಏನು ಮಾಡಿದ್ದಾರೆ ಎಂದು ತೋರಿಸಲಿ. ಅವರು ಏನು ಮಾಡದೇ ಇದ್ದರೂ ವಿದ್ಯಾವಂತ ವರ್ಗ, ಯುವಕರು ಮೋದಿ ಹೆಸರನ್ನು ಜಪ ಮಾಡುತ್ತಿದ್ದಾರೆ. ನಾವು ಮಾಡಿದ ಕೆಲಸಗಳನ್ನು ಧೈರ್ಯವಾಗಿ ಹೇಳಿದರೆ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯ. ನಾವು ಸತ್ಯ ಹೇಳಲು ಬಾಯಿ ಬಿಡುವುದಿಲ್ಲ. ಅಮಿತ್ಶಾ ಮತ್ತು ಮೋದಿ ಸುಳ್ಳು ಹೇಳಿಕೊಂಡೇ ಅಧಿಕಾರಕ್ಕೆ ಬರುತ್ತಿದ್ದಾರೆ ಎಂದರು.
ದೇಶದಲ್ಲಿ ಕಳೆದ ಚುನಾವಣೆಯಲ್ಲಿ ನಾವು ಹನ್ನೆರಡುವರೆ ಕೋಟಿಯಷ್ಟು ಮತ ಪಡೆದಿದ್ದೇವೆ. ಬಿಜೆಪಿಯವರೂ ಅಷ್ಟೇ ಪ್ರಮಾಣದ ಮತ ಪಡೆದಿದ್ದಾರೆ. ಅವರಿಗೆ ಸಂಸದರ ಸಂಖ್ಯಾಬಲ ಹೆಚ್ಚಿದೆ. ನಮಗೆ ಕಡಿಮೆ ಇದೆ. ಬಿಜೆಪಿಯವರು ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು, ರೈತರನ್ನು ಸರ್ವನಾಶ ಮಾಡುತ್ತಿದ್ದಾರೆ.
ಮೊದಲಿನಿಂದಲೂ ನಾವು ಯಾರ ವಿಷಯದಲ್ಲೂ ತಾರತಮ್ಯ ಮಾಡದೆ ಎಲ್ಲರನ್ನೂ ಜತೆಗೆ ಕರೆದುಕೊಂಡು ಹೋಗುತ್ತಿದ್ದೇವೆ. ಮುಂದಿನ ದಿನಗಳಲ್ಲೂ ಇದೇ ರೀತಿ ಮುಂದುವರೆಯಬೇಕು. ನಮ್ಮಲ್ಲಿ ಸಾಮಾಜಿಕ ಜಾಲ ತಾಣ ಪ್ರಬಲವಾಗಿಲ್ಲ. ವೈಯಕ್ತಿಕವಾಗಿ ಪ್ರತಿಯೊಬ್ಬರಿಗೂ ಕಾಂಗ್ರೆಸ್ ಸಿದ್ಧಾಂತ, ಕಾರ್ಯಕ್ರಮಗಳನ್ನು ತಲುಪಿಸಬೇಕು ಎಂದು ಹೇಳಿದರು.
ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಪಕ್ಷದ ಹಿತಕ್ಕಾಗಿ ಕೆಲಸ ಮಾಡದೇ ಇದ್ದರೆ ನಮಗೆ ಉಳಿಗಾಲವಿಲ್ಲ. ಮನಬಿಚ್ಚಿ ಮಾತನಾಡದೆ ಇದ್ದರೆ, ಭಿನ್ನಾಭಿಪ್ರಾಯಗಳನ್ನು ಸರಿಪಡಿಸದಿದ್ದರೆ, ನಮ್ಮಷ್ಟೆ ನಾವೇ ಕಾಲು ಎಳೆದುಕೊಂಡರೆ ಮುಂದಿನ ಪೀಳಿಗೆಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಖರ್ಗೆ ಎಚ್ಚರಿಸಿದರು.
ನಾನು 27ನೇ ವಯಸ್ಸಿಗೇ ಶಾಸಕನಾಗಿ ಆಯ್ಕೆಯಾದವನು. ಬ್ಲಾಕ್ ಕಾಂಗ್ರೆಸ್ನಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನದವರೆಗೆ ಎಲ್ಲಾ ಜವಾಬ್ದಾರಿ ನಿಭಾಯಿಸಿದ್ದೇನೆ. 48 ವರ್ಷದಲ್ಲಿ ಕಳೆದ ಚುನಾವಣೆಯ ಸೋಲು ನನಗೆ ರಾಜಕೀಯವಾಗಿ ಬಿದ್ದ ಅತ್ಯಂತ ಪೆಟ್ಟು, ಪಕ್ಷದ ಕಾರ್ಯಕರ್ತರು, ಮುಖಂಡರು ಪ್ರಾಮಾಣಿಕವಾಗಿ ಕೆಲಸ ಮಾಡಿ ಸೋತಿದ್ದರೆ ನನಗೆ ಬೇಸರವಿರಲಿಲ್ಲ. ಆದರೆ, ನಮ್ಮನ್ನು ನಾವೇ ಕಾಲೆಳೆದುಕೊಂಡು ಸೋಲುವುದು ಬೇಸರ ತರುತ್ತದೆ.
ನನ್ನನ್ನು ಸೋಲಿಸಲು ಆರ್ಎಸ್ಎಸ್ನ ಸುಮಾರು 200ಕ್ಕೂ ಹೆಚ್ಚು ಕಾರ್ಯಕರ್ತರು ಒಂದು ವರ್ಷದಿಂದ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ಅವರಿಗೆ ತಿಂಗಳಿಗೆ 15 ಸಾವಿರ ವೇತನ ನೀಡಲಾಗುತ್ತಿತ್ತು. ನಮ್ಮಲ್ಲಿ ಹಣವಿಲ್ಲ. ತತ್ವಸಿದ್ದಾಂತಗಳಿವೆ. ಆರ್ಎಸ್ಎಸ್ನ ತತ್ವಸಿದ್ದಾಂತಗಳನ್ನು ಸೋಲಿಸದೇ ಇದ್ದರೆ ರಾಜಕೀಯವಾಗಿ ನಮಗೆ ಉಳಿಗಾಲವಿಲ್ಲ ಎಂದರು.
ದಲಿತರು, ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲಾ ರೀತಿಯ ಮೀಸಲಾತಿಗಳನ್ನು ಪುನರ್ ವಿಮರ್ಶೆಗೆ ಒಳಪಡಿಸಬೇಕೆಂದು ಆರ್ಎಸ್ಎಸ್ನ ಭಾಗವತ್ ಹೇಳಿದ್ದಾರೆ. ಕಳೆದ 7-8 ವರ್ಷದಿಂದ ಇದೇ ರೀತಿಯ ಚರ್ಚೆಗಳು ನಡೆಯುತ್ತಿವೆ. ಅದರ ವಿರುದ್ಧ್ ಪಕ್ಷ ಹೋರಾಟ ಮಾಡಬೇಕಿದೆ ಎಂದು ಕರೆ ನೀಡಿದರು.
ಪಕ್ಷ ಬಿಟ್ಟು ಹೋದವರಿಗೆ ಮರ್ಯಾದೆ ಇರುವುದರಿಲ್ಲ. ಇಲ್ಲಿ ಮುಖ್ಯಮಂತ್ರಿಯಾಗಿ, ಸಚಿವರಾಗಿ ಅಧಿಕಾರ ಅನುಭವಿಸಿ ಬೇರೆ ಪಕ್ಷಕ್ಕೆ ಹೋಗಿ ಮೂಲೆಗುಂಪಾದವರ ಉದಾಹರಣೆಗಳು ಸಾಕಷ್ಟಿವೆ ಎಂದರು.
ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ಖಂಡ್ರೆ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯ್ಲಿ, ಮಾಜಿ ಸಚಿವರಾದ ಎಚ್.ಕೆ.ಪಾಟೀಲ್, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ, ಕೃಷ್ಣಬೈರೇಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.