ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಭಾರೀ ಅಸಮಾಧಾನ ಸ್ಫೋಟಗೊಂಡಿದೆ. ಬಿಜೆಪಿ ಹಿರಿಯ ನಾಯಕರು ಪ್ರಮಾಣ ವಚನ ಸಮಾರಂಭಕ್ಕೆ ಗೈರಾಗುವ ಮೂಲಕ ಬೇಸರ ತೋರ್ಪಡಿಸಿದ್ದಾರೆ. ಶಾಸಕರಾದ ರಾಜುಗೌಡ, ಬಾಲಚಂದ್ರ ಜಾರಕಿಹೊಳಿ, ರೇಣುಕಾಚಾರ್ಯ, ಉಮೇಶ್ ಕತ್ತಿಯಂತಹ ಘಟಾನುಘಟಿಗಳಿಗೆ ಸಚಿವ ಸ್ಥಾನ ಸಿಗದಿರುವುದು ಸರ್ಕಾರಕ್ಕೆ ಕುತ್ತಾಗಿ ಪರಿಣಮಿಸಿದೆ. ಸದ್ಯವೀಗ ಸಚಿವ ಸ್ಥಾನದಿಂದ ವಂಚಿತರಾದವರು ಬಹಿರಂಗವಾಗಿ ಅಸಮಾಧಾನ ಹೊರಹಾಕದಿದ್ದರೂ, ತಮ್ಮ ಬೆಂಬಲಿಗರು ರಾಜ್ಯ ನಾಯಕರ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ. ಅಚ್ಚರಿಯ ವಿಚಾರವೆಂದರೆ ಸಂಪುಟದಲ್ಲಿ ಯಡಿಯೂರಪ್ಪ ಅವರದ್ದೇ ಬಲ ಕುಂದಿದಂತಿದೆ. ಅವರ ಅನೇಕ ಆಪ್ತರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ.
ಸಿಎಂ ಬಿ.ಎಸ್ ಯಡಿಯೂರಪ್ಪನವರ ಆಪ್ತರಾದ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಶಿವನಗೌಡ ನಾಯಕ್, ಬಸನಗೌಡ ಯತ್ನಾಳ್, ಬಾಲಚಂದ್ರ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಉಮೇಶ್ ಕತ್ತಿ, ಸುಳ್ಯ ಶಾಸಕ ಎಸ್. ಅಂಗಾರ, ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮುಂತಾದವರಿಗೆ ಮಂತ್ರಿ ಭಾಗ್ಯ ಸಿಕ್ಕಿಲ್ಲ. ಹೀಗಾಗಿ ಬಿಜೆಪಿ ಹೈಕಮಾಂಡ್ ವಿರುದ್ಧ ಗರಂ ಆಗಿರುವ ಮೇಲಿನ ಘಟಾನುಘಟಿ ನಾಯಕರು, ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ದಕ್ಷಿಣ ಕನ್ನಡದಲ್ಲಿನ 8 ಕ್ಷೇತ್ರಗಳ ಪೈಕಿ 7ರಲ್ಲಿ ಬಿಜೆಪಿ ಗೆದ್ದಿದೆ. ಉಡುಪಿ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ. ಆದರೂ, ಸುಳ್ಯ ಶಾಸಕ ಎಸ್ ಅಂಗಾರ ಅವರಿಗೆ ಸಚಿವ ಸ್ಥಾನ ನೀಡಿಲ್ಲ. ಅಂತೆಯೇ ದಕ್ಷಿಣ ಕನ್ನಡಕ್ಕೂ ಯಾವುದೇ ಮಂತ್ರಿ ಸ್ಥಾನ ಸಿಕ್ಕಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರಕ್ಕೆ ಇದೇ ವಿಚಾರ ಕುತ್ತಾಗಿ ಪರಿಣಮಿಸಬಹುದು.
ಇತ್ತ ಹೈದರಬಾದ್-ಕರ್ನಾಟಕ ಭಾಗವನ್ನು ಕಡೆಗಣಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಕಲ್ಬುರ್ಗಿಯ ಶಾಸಕ ದತ್ತಾತ್ರೇಯ ರೇವೂರು ಅವರು ಬೇಸರ ವ್ಯಕ್ತಡಿಸಿದ್ಧಾರೆ. ಅಂತೆಯೇ ಮಂತ್ರಿಗಿರಿ ತಪ್ಪಿರುವುದಕ್ಕೆ ಯಾದಗಿರಿಯ ಸುರಪುರದ ಶಾಸಕ ರಾಜೂಗೌಡ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ ರಾಜುಗೌಡ ತಮ್ಮ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ದಾರೆ.
ಈ ಮಧ್ಯೆ ಮತ್ತೋರ್ವ ಶಾಸಕ ಅಭಯ್ ಪಾಟೀಲ್ ಸಹ ಅಸಮಾಧಾನ ಹೊರಹಾಕಿದ್ದಾರೆ. ನಾವು 5-10 ಶಾಸಕರು ಪಕ್ಷದಲ್ಲಿದ್ದಾಗಲೂ ಕೆಲಸ ಮಾಡಿದ್ದೇನೆ. ಆದರೀಗ ಪಕ್ಷ ಯಾತಕ್ಕಾಗಿ ಸಚಿವ ಸ್ಥಾನದಿಂದ ಕೈ ಬಿಟ್ಟಿದೆ ಎಂಬುದು ಗೊತ್ತಿಲ್ಲ ಎಂದರು. ಇನ್ನೂ ತಿಪ್ಪಾರೆಡ್ಡಿ ಸಹ ಸಚಿವ ಸ್ಥಾನ ಸಿಗದ್ದಕ್ಕೆ ಬೇಸರ ವ್ಯಕ್ತಪಡಿಸಿದ್ಧಾರೆ.