ಪೂರ್ಣ ಪ್ರಮಾಣದ ಸರ್ಕಾರ ನೀಡುವಲ್ಲಿ ವಿಫಲವಾದ ಬಿಜೆಪಿ-ಜೆಡಿಎಸ್ ವಕ್ತಾರ ರಮೇಶ್ ಬಾಬು

ಬೆಂಗಳೂರು, ಆ.20- ರಾಜ್ಯದಲ್ಲಿ ಬಿಜೆಪಿ ಪಕ್ಷ ಪೂರ್ಣ ಪ್ರಮಾಣದ ಸರ್ಕಾರ ನೀಡುವಲ್ಲಿ ವಿಫಲವಾಗಿದೆ ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ರಮೇಶ್ ಬಾಬು ಟೀಕಿಸಿದ್ದಾರೆ.

ಮುಖ್ಯಮಂತ್ರಿ ಸೇರಿದಂತೆ 18 ಸದಸ್ಯರ ಸಂಪುಟ ರಚಿಸಿದ್ದಾರೆ. ಆದರೆ ಜನರ ಆಶೋತ್ತರಗಳನ್ನು ತಲುಪಲು ಪೂರ್ಣ ಪ್ರಮಾಣದ ಹಾಗೂ ಎಲ್ಲಾ ವರ್ಗಗಳಿಗೆ, ಪ್ರದೇಶಗಳಿಗೆ ಪ್ರಾತಿನಿಧ್ಯ ನೀಡುವ ಪೂರ್ಣ ಪ್ರಮಾಣದ ಸಂಪುಟ ರಚಿಸಲು ಬಿಜೆಪಿ ಪಕ್ಷವು ಮತ್ತು ಅದರ ನಾಯಕರು ವಿಫಲವಾಗಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದರಿಂದ ರಾಜ್ಯದ ಪ್ರಗತಿ ಕುಂಠಿತವಾಗುತ್ತದೆ ಮತ್ತು ಆಡಳಿತ ಯಂತ್ರ ನಿದಾನವಾಗಲಿದೆ.

ಬಿಜೆಪಿ ತಾನು ರಾಜ್ಯದ ಜನರಿಗೆ ನೀಡಿದ ಮಾತಿಗೆ ತಪ್ಪಿದ್ದು, ಈ ಕೂಡಲೇ ರಾಜ್ಯದ ಜನರ ಕ್ಷಮೆ ಕೇಳಬೇಕು ಮತ್ತು ಕಾರಣ ನೀಡಬೇಕು ಎಂದರು.
ಮಾಜಿ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ಅಗ್ರಗಣ್ಯ ನಾಯಕ ಡಿ.ದೇವರಾಜ ಅರಸರ 104 ನೇ ಜನ್ಮದಿನದಂದು ಬಿಜೆಪಿ ಮಂತ್ರಿಮಂಡಲ ರಚನೆ ಮಾಡಿದೆ.

ಈ ಸಂಪುಟದಲ್ಲಿ ಸ್ವಾಭಾವಿಕವಾಗಿ ಹಿಂದುಳಿದ ವರ್ಗಗಳಿಗೆ ಹೆಚ್ಚು ಪ್ರಾತಿನಿಧ್ಯ ದೊರೆಯುತ್ತದೆ ಎಂದು ರಾಜ್ಯದ ಜನರು ಬಯಸಿದ್ದರು. ಆದರೆ ಅರಸುರವರಿಗೆ ಅವಮಾನಿಸುವ ರೀತಿಯಲ್ಲಿ ಕೇವಲ ಇಬ್ಬರು ಹಿಂದುಳಿದ ವರ್ಗದವರಿಗೆ ಸಂಪುಟದಲ್ಲಿ ಅವಕಾಶ ನೀಡಲಾಗಿದೆ. ಇದರಿಂದ ಬಿಜೆಪಿ ಅಜೆಂಡಾ ಬಯಲಾಗಿದೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಆರನೇ ಸ್ಥಾನದಲ್ಲಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯದ ರಾಜಕೀಯ ಇತಿಹಾಸದಲ್ಲಿ ಇದೊಂದು ಅವಮಾನಕರ ಸಂಗತಿ. ಒಬ್ಬ ಮಾಜಿ ಮುಖ್ಯಮಂತ್ರಿಗೆ ಮಂತ್ರಿ ಪದವಿ ಮೇಲೆ ಇಷ್ಟೊಂದು ವ್ಯಾಮೋಹ ಇರಬಾರದಿತ್ತು.

ಇದು ಸಂಘ ಪರಿವಾರದಿಂದ ಕಲಿತದ್ದೋ ಅಥವಾ ಕುಟುಂಬ ಒತ್ತಡದ ಫಲವೋ ಅವರೇ ಖಚಿತಪಡಿಸಬೇಕು ಎಂದರು.
ಏಕ ವ್ಯಕ್ತಿ ಸಂಪುಟಕ್ಕೆ ಕೊನೆ ಹಾಡಿದರೂ, ಅರೆ ಬರೆ ಸಂಪುಟದ ಮೂಲಕ ರಾಜ್ಯದ ಆಡಳಿತವನ್ನು ಬಿಜೆಪಿ ಮೂರಾಬಟ್ಟೆ ಮಾಡಿದೆ.

ಅತಿ ದಾರುಣವಾದ ಪ್ರಕೃತಿ ವಿಕೋಪಕ್ಕೆ ರಾಜ್ಯ ಒಳಗಾಗಿದ್ದು, ಜನರ ಆಸರೆಗಾಗಿ ಒಂದು ಪೂರ್ಣ ಪ್ರಮಾಣದ ಸರಕಾರ ನೀಡಲೂ ಸಾಧ್ಯವಾಗದ ಬಿಜೆಪಿ ರಾಜ್ಯದ ಜನರಿಗೆ ವಿಶ್ವಾಸ ದ್ರೋಹ ಎಸಗಿದೆ ಎಂದು ರಮೇಶ್ ಬಾಬು ಆರೋಪಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ