ಬೆಂಗಳೂರು, ಆ.20- ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕೊನೆಗೆ ಅನರ್ಹಗೊಂಡಿರುವ 17 ಮಂದಿಯ ಸ್ಥಿತಿ ಈಗಲೂ ಅತಂತ್ರವಾಗಿದೆ.
ಪಕ್ಷಾಂತರ ನಿಷೇಧ ಕಾಯ್ದೆ ಆಧರಿಸಿ ಸ್ಪೀಕರ್ ಅವರು ನೀಡಿರುವ ತೀರ್ಪಿನ ಪ್ರಕಾರ ಅನರ್ಹ ಶಾಸಕರು 15ನೇ ವಿಧಾನಸಭೆ ಅವಧಿ ಮುಕ್ತಾಯಗೊಳ್ಳುವವರೆಗೂ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ನಿಗಮ ಮಂಡಳಿ, ಸಚಿವ ಸ್ಥಾನ ಸೇರಿದಂತೆ ಯಾವುದೇ ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸುವಂತಿಲ್ಲ.
ಈ ತೀರ್ಪನ್ನು ಪ್ರಶ್ನಿಸಿ ಅನರ್ಹಗೊಂಡಿರುವ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿರುವ ನ್ಯಾಯಾಲಯ, ವಿಚಾರಣೆಗೆ ಶೀಘ್ರವೇ ದಿನಾಂಕ ನಿಗದಿ ಮಾಡುವ ಸೂಚನೆ ನೀಡಿದೆ.
ಸ್ಪೀಕರ್ ಅವರ ಆದೇಶದ ಪ್ರಕಾರ ಯಾವುದೇ ಹುದ್ದೆ ಅಲಂಕರಿಸಲು ಸಾಧ್ಯವಾಗದ ಅನರ್ಹ ಶಾಸಕರು ಇಂದು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಗೈರು ಹಾಜರಾಗಿದ್ದರು.
ಬಿಜೆಪಿ ಸರ್ಕಾರದ ಸಚಿವ ಸಂಪುಟದಲ್ಲಿ ಈಗಾಗಲೇ ಮುಖ್ಯಮಂತ್ರಿ ಹಾಗೂ 17 ಮಂದಿ ಸಚಿವರು ಸೇರಿ 18 ಹುದ್ದೆಗಳು ಭರ್ತಿಯಾಗಿವೆ. ಸಂಪುಟದ 34 ಹುದ್ದೆಗಳ ಪೈಕಿ ಇನ್ನು ಬಾಕಿ ಇರುವುದು 16 ಮಾತ್ರ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರವನ್ನು ಪತಗೊಳಿಸಿದ ಕಾಂಗ್ರೆಸ್ನ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಪ್ರತಾಪ್ಗೌಡ ಪಾಟೀಲ್, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್, ಎಂ.ಟಿ.ಬಿ.ನಾಗರಾಜ್, ಆನಂದ್ಸಿಂಗ್, ರೋಷನ್ ಬೇಗ್, ಮುನಿರತ್ನ, ಡಾ.ಸುಧಾಕರ್, ಸೀಮಂತ್ ಪಾಟೀಲ್. ಜೆಡಿಎಸ್ನ ಎಚ್.ವಿಶ್ವನಾಥ್, ನಾರಾಯಣಗೌಡ, ಕೆ.ಗೋಪಾಲಯ್ಯ, ಪಕ್ಷೇತರ ಶಾಸಕ ಆರ್.ಶಂಕರ್ ಸೇರಿ ಅಷ್ಟೂ ಮಂದಿ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
ಇಂದು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆರ್.ಶಂಕರ್ ಬಿಟ್ಟು ಉಳಿದ ಎಲ್ಲರೂ ಗೈರು ಹಾಜರಾಗಿದ್ದರು.
ಸಂಪುಟದಲ್ಲಿರುವ 16 ಸ್ಥಾನಗಳಲ್ಲಿ ಅನರ್ಹರಿಗೆ ಹಂಚಿಕೆ ಮಾಡಿದರೆ ಬಿಜೆಪಿಯ ಹಿರಿಯರು ಮತ್ತು ನಿಷ್ಟಾವಂತರು ಬಂಡಾಯವೇಳುವ ಆತಂಕವಿದೆ.
ಈಗಾಗಲೇ ಸಂಪುಟಕ್ಕೆ ತೆಗೆದುಕೊಂಡಿರುವ 17 ಮಂದಿಯ ಪೈಕಿ ಕೆಲವರ ವಿರುದ್ಧ ಅಸಮಾಧಾನಗಳು ಕೇಳಿ ಬರುತ್ತಿವೆ. ಸಚಿವ ಸ್ಥಾನ ಸಿಗದಿದ್ದಕ್ಕಾಗಿ ಕೆಲವು ಶಾಸಕರು ಬಹಿರಂಗ ಹೇಳಿಕೆಗಳನ್ನು ನೀಡಲಾರಂಭಿಸಿದ್ದಾರೆ.
ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿದೆಯೋ ಕಾದು ನೋಡಬೇಕಿದೆ.