ಶ್ರೀನಗರ, ಆ.19- ಭಾರತೀಯ ಸಂವಿಧಾನದ 370ನೆ ವಿಧಿ ರದ್ಧತಿ ನಂತರ ಜಮ್ಮು ಮತ್ತು ಕಾಶ್ಮೀರ ಪ್ರಾಂತ್ಯದಲ್ಲಿ ತಲೆದೋರಿದ್ದ ಬಿಗುವಿನ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ ಯಾದರೂ ಮುನ್ನೆಚ್ಚರಿಕೆ ಕ್ರಮವಾಗಿ ವ್ಯಾಪಕ ಬಂದೋಬಸ್ತ್ ಮುಂದುವರೆಸಲಾಗಿದೆ.
ಈ ಮಧ್ಯೆ ಕಣಿವೆ ಪ್ರಾಂತ್ಯದಲ್ಲಿ ನಿರ್ಬಂಧ ತೆರವುಗೊಳಿಸಿದ ನಂತರ ಇಂದಿನಿಂದ ರಾಜಧಾನಿ ಶ್ರೀನಗರದಲ್ಲಿ 190 ಪ್ರಾಥಮಿಕ ಶಾಲೆಗಳು ಪುನರಾರಂಭವಾದರೂ ಆತಂಕದ ಕಾರಣದಿಂದಾಗಿ ವಿದ್ಯಾರ್ಥಿಗಳು ಹಾಜರಾಗಲಿಲ್ಲ.
ಶ್ರೀನಗರದ 190 ಪ್ರೈಮರಿ ಸ್ಕೂಲ್ಗಳು ಇಂದು ಮರು ಆರಂಭಗೊಂಡು ಶಿಕ್ಷಕರು ಕರ್ತವ್ಯಕ್ಕೆ ಹಾಜರಾದರು. ಆದರೆ ಮಕ್ಕಳ ಹಾಜರಾತಿ ಬೆರಳೆಣಿಕೆಯಷ್ಟಿತ್ತು.
ಕಳೆದ 15 ದಿನಗಳಿಂದ ಮುಚ್ಚಲ್ಪಟ್ಟಿರುವ ಖಾಸಗಿ ಶಾಲಾ ಕಾಲೇಜುಗಳು ಯಥಾ ಸ್ಥಿತಿಯಲ್ಲಿ ಮುಂದುವರೆದಿದೆ.
ಶ್ರೀನಗರ ಮತ್ತು ಜಮ್ಮುವಿನಲ್ಲಿ ನಿರ್ಬಂಧ ತೆರವುಗೊಳಿಸಿ ಜನಸಂಚಾರಕ್ಕೆ ಅನುವು ಮಾಡಿಕೊಟ್ಟ ಬೆನ್ನಲ್ಲೇ ನಿನ್ನೆ ಕೆಲವೆಡೆ ಗಲಭೆಯಂತಹ ಅಹಿತಕರ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಮತ್ತೆ ನಿರ್ಬಂಧ ವಿಧಿಸಲಾಗಿದೆ.
ಬಹುತೇಕ ಕಡೆ ಸ್ಥಿರ ದೂರವಾಣಿ ಸೇವೆ ಆರಂಭಗೊಂಡಿದ್ದು , ನಿನ್ನೆ ರಾತ್ರಿಯಿಂದ ಮೊಬೈಲ್ನ್ ಫೋನ್ಗಳಿಗೆ ಒಳ ಕರೆಗಳನ್ನು ಮಾತ್ರ ಲಭಿಸುವಂತೆ ಮಾಡಲಾಗಿದೆ.