ಬೆಂಗಳೂರು, ಆ.19 – ಬಿಬಿಎಂಪಿಯಲ್ಲಿ ಯಾರಿಗೆ ಸಂಖ್ಯಾಬಲವಿರುತ್ತೋ ಅವರು ಮೇಯರ್ ಆಗುತ್ತಾರೆ ಎಂದು ಹೇಳುವ ಮೂಲಕ ಕೊನೆ ಅವಧಿಯಲ್ಲಿ ಬಿಜೆಪಿ ಮೇಯರ್ ಆಗುವ ಸುಳಿವನ್ನು ಮಾಜಿ ಶಾಸಕ ಮುನಿರತ್ನ ನೀಡಿದ್ದಾರೆ.
ಮುಖ್ಯಮಂತ್ರಿ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ವರ್ಷದ ಹಿಂದೆಯೇ ಬಿಜೆಪಿಯವರು ಮೇಯರ್ ಆಗಬೇಕಿತ್ತು. ಆಗಲೇ ಆಪರೇಷನ್ ಕಮಲ ಆಗಿತ್ತು ಎಂದು ಹೇಳುವ ಮೂಲಕ ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರ ಗುದ್ದುಗೆಗೇರುವ ಮುನ್ಸೂಚನೆಯನ್ನು ನೀಡಿದ್ದಾರೆ.
ನೂರು ಸದಸ್ಯಬಲ ಹೊಂದಿದ್ದರೂ ಬಿಜೆಪಿ ಬಿಬಿಎಂಪಿಯಲ್ಲಿ ಅಧಿಕಾರ ಗದ್ದುಗೆ ಹಿಡಿಯಲು ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರರು ಮೈತ್ರಿ ಮಾಡಿಕೊಂಡು ಶಾಸಕರು, ರಾಜ್ಯಸಭಾ ಸದಸ್ಯರು, ಸಂಸದರು, ವಿಧಾನಪರಿಷತ್ ಸದಸ್ಯರ ಬಲದೊಂದಿಗೆ ಅಧಿಕಾರ ಹಿಡಿದಿದ್ದರು.
ಈಗ ಮೈತ್ರಿ ಸರ್ಕಾರ ಹೋಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ಗೆ ಬೆಂಬಲ ನೀಡಿದ್ದ ನಗರದ ಹಲವು ಶಾಸಕರು ಅನರ್ಹಗೊಂಡಿದ್ದಾರೆ. ಹೀಗಾಗಿ ಮೈತ್ರಿ ಬಲ ಕುಸಿದಿದ್ದು, ಬಿಬಿಎಂಪಿಯಲ್ಲಿ ಬಿಜೆಪಿಗೆ ಅಧಿಕಾರ ಸಿಗುವುದು ನಿಚ್ಛಳವಾಗಿದೆ. ಮುನಿರತ್ನ ಅವರ ಹೇಳಿಕೆ ಇದಕ್ಕೆ ಪುಷ್ಠಿ ನೀಡುವಂತೆ ಇದೆ.