ಬೆಳಗಾವಿ, ಆ.19- ಬೆಂಗಳೂರಿನ ರಾಮಮೂರ್ತಿನಗರ ಎನ್ಆರ್ಐ ಬಡಾವಣೆಯಲ್ಲಿ ಪುಣ್ಯಭೂಮಿ ಸೇವಾ ಫೌಂಡೇಷನ್ ವತಿಯಿಂದ ಸಾರ್ವಜನಿಕರಿಂದ ಸಂಗ್ರಹಿಸಿದ್ದ ಸಾಮಾಗ್ರಿಗಳನ್ನು ಉತ್ತರ ಕರ್ನಾಟಕದ ನೆರೆ ಸಂತ್ರಸ್ಥರಿಗೆ ತಲುಪಿಸಲಾಯಿತು.
ಬೆಳಗಾವಿ ಗ್ರಾಮಾಂತರ ಪ್ರದೇಶಗಳು ಸೇರಿದಂತೆ ನದಿ ದಡದ ಆಸುಪಾಸು ಪ್ರದೇಶಗಳಲ್ಲಿ ಹಾನಿಗೊಳಗಾಗಿದ್ದ ಮನೆಗಳ ಬಳಿ ಸ್ಥಳೀಯ ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹಾಯದಿಂದ ಸಾಮಾಗ್ರಿಗಳನ್ನು ತಲುಪಿಸುವ ಕೆಲಸ ಮಾಡಿದೆ.
ಅವಶ್ಯಕವಾಗಿರುವ ಅಕ್ಕಿ, ಬೇಳೆ, ಸಕ್ಕರೆ, ಸೋಪು, ಬ್ರಶ್, ಶಾಂಪು, ಬಟ್ಟೆ, ಸೀರೆ, ಮೆಡಿಸನ್, ಸೊಳ್ಳೆ ಬತ್ತಿ, ಚಾಪೆ, ಗೋಧಿ ಹಿಟ್ಟು, ಬಿಸ್ಕಟ್, ಅಡುಗೆ ಎಣ್ಣೆ, ಹಾಲು ಸೇರಿದಂತೆ ವಿವಿಧ ಸಾಮಾಗ್ರಿಗಳನ್ನು ಒಂದು ಚೀಲದಲ್ಲಿ ಮೂಟೆ ಕಟ್ಟಿ ಸುಮಾರು 500 ಕುಟುಂಬಗಳಿಗೆ ಹಸ್ತಾಂತರಿಸುವ ಕೆಲಸ ಮಾಡಲಾಯಿತು.
ಉಜ್ಗಾವ್, ಕುದರೆಮನಿ, ಬಿಕ್ಕನಿಕೆರೆ, ತುರುಮುರಿ, ಖಾನಾಪುರ ಚಿಕ್ಕೋಡಿ ಭಾಗಗಳಲ್ಲಿ ತೊಂದರೆಗೊಳಗಾದ ಮನೆಗಳಿಗೆ ತೆರಳಿ ಸಾಮಾಗ್ರಿಗಳನ್ನು ನೀಡಲಾಯಿತು.
ಈ ವೇಳೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಇದುವರೆಗೂ ಕಂಡರೆಯದ ಪ್ರವಾಹ ನೋಡಿದ್ದೇವೆ. ಉತ್ತರ ಕರ್ನಾಟಕ ಸಂಪೂರ್ಣ ಮುಳುಗಿತ್ತು.ಇದೀಗ ಸ್ವಲ್ಪ ಸ್ವಲ್ಪವೇ ನೀರು ಕಡಿಮೆಯಾಗುತ್ತಿದೆ.ಜನರು ಸಾಮಾನ್ಯ ಜೀವನ ನಡೆಸಲು ಇನ್ನು ಸಮಯ ಹಿಡಿಯುತ್ತದೆ. ಅಲ್ಲಿಯವರೆಗೂ ಅವರಿಗೆ ಅಗತ್ಯವಿರುವ ವಸ್ತುಗಳ್ನು ನೀಡುತ್ತಾ ಬಂದಿದ್ದೇನೆ ಎಂದು ಹೇಳಿದರು.
ಲಕ್ಷ್ಮೀತಾಯಿ ಫೌಂಡೇಶನ್ನಿಂದಲೂ ಸಹ ಸಂತ್ರಸ್ಥರಿಗೆ ನೆರವು ನೀಡುವ ಕೆಲಸ ಮಾಡಲಾಗುತ್ತಿದೆ ಎಂದರು.
ಪುಣ್ಯಭೂಮಿ ಸೇವಾ ಫೌಂಡೇಷನ್ ಅಧ್ಯಕ್ಷೆ, ಬೆಂಗಳೂರು ನಗರ ಉತ್ತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಾ ಕೃಷ್ಣಮೂರ್ತಿ ಮಾತನಾಡಿ, ಕಳೆದ ಬಾರಿ ಮಲೆನಾಡು ಭಾಗದಲ್ಲಿ ಜಲಪ್ರಳಯವಾದಾಗಲೂ ಸಹ ನಮ್ಮ ಪೌಂಡೇಶನ್ ವತಿಯಿಂದ ಅನಾಹುತ ಜಾಗಗಳಿಗೆ ತೆರಳಿ ಆಹಾರ ಸಾಮಾಗ್ರಿಗಳನ್ನು ನೀಡುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.
ನೆರೆ ಸಂತ್ರಸ್ಥರ ನೆರವಿಗೆ ಧಾವಿಸಿದ ಪ್ರತಿಯೊಬ್ಬ ನಾಗರೀಕನಿಗೂ ಧನ್ಯಾವದ ತಿಳಿಸಿದರು. ಸಾಮಾಗ್ರಿಗಳನ್ನು ಸಂತ್ರಸ್ಥರಿಗೆ ನೀಡಲು ಬೆಂಗಳೂರಿನಿಂದ ಸುಮಾರು 20 ಮಂದಿ ಸ್ವಯಂ ಪ್ರೇರಿತವಾಗಿ ಬಂದು ನಮ್ಮ ಜೊತೆ ಕೈ ಜೋಡಿಸಿದ್ದಾರೆ ಎಂದು ಹೇಳಿದರು.