ಬೆಂಗಳೂರು, ಆ.19- ಟೆಲಿಪೋನ್ ಕದ್ದಾಲಿಕೆ ಆರೋಪದ ಪ್ರಕರಣವನ್ನು ಸಿಬಿಐಗೆ ವಹಿಸುವಲ್ಲಿ ಬಿಜೆಪಿ ಕೇಂದ್ರ ನಾಯಕರು ಮಧ್ಯ ಪ್ರವೇಶ ಮಾಡಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ದೇಶದ ವಿಚಾರದಲ್ಲಿ ಹೆಚ್ಚು ಗಮನ ಹರಿಸಿದ್ದಾರೆ. ಆದರೆ, ಪೋನ್ ಕದ್ದಾಲಿಕೆ ವಿಚಾರದಲ್ಲಿ ಅವರು ಮಧ್ಯ ಪ್ರವೇಶಿಸಿಲ್ಲ. ಅವರ ಸೂಚನೆ ಮೇರೆಗೆ ಸಿಬಿಐಗೆ ವಹಿಸಲಾಗಿದೆ ಎಂಬುದನ್ನು ಅವರು ಅಲ್ಲಗಳೆದರು.
ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಈ ತೀರ್ಮಾನ ಕೈಗೊಂಡಿದ್ದಾರೆ ಎಂಬುದನ್ನು ಪರೋಕ್ಷವಾಗಿ ಹೇಳಿದ ಅವರು, ಈ ರಾಜಕೀಯ ಒತ್ತಡಗಳಿಂದ ಸಿಬಿಐ ತನಿಖೆಗೆ ವಹಿಸಿರಬಹುದು ಎಂದರು.
ಈ ಪ್ರಕರಣವನ್ನು ಮಾಧ್ಯಮಗಳಲ್ಲಿ ಇಷ್ಟೊಂದು ವಿಜೃಂಭಿಸುವ ಅಗತ್ಯವಿಲ್ಲ. ಸುಪ್ರೀಂಕೋರ್ಟ್ ಪಕ್ಷಾಂತರ ವಿಚಾರದಲ್ಲಿ ಟೆಲಿಪೋನ್ ಟ್ಯಾಪ್ ಮಾಡುವುದು ತಪ್ಪಲ್ಲ ಎಂದು ಪ್ರಕರಣವೊಂದರಲ್ಲಿ ಹೇಳಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪರೇಷನ್ ಕಮಲದ ಬಗ್ಗೆಯೂ ತನಿಖೆಯಾಗಲಿ ಎಂದು ಹೇಳಿದ್ದಾರೆ.
ಈ ಹಿಂದೆ ಯಡಿಯೂರಪ್ಪ ಸಿಬಿಐಗೆ ಯಾವುದೇ ಪ್ರಕರಣ ಕೊಡುವುದಿಲ್ಲ ಎಂದು ಹೇಳಿದ್ದನ್ನು ನಾನು ಗಮನಿಸಿದ್ದೇನೆ. ಈ ಹಿಂದೆ ಯಡಿಯೂರಪ್ಪ ನಂತರ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಅಧಿಕಾರಾವಧಿಯಲ್ಲಿ ನಡೆದಿರುವ ಪೋನ್ ಕದ್ದಾಲಿಕೆ ವಿಷಯವನ್ನು ತನಿಖೆಗೆ ಒಳಪಡಿಸಲಿ ಎಂದರು.
ಯಾವ ಯಾವ ಅವಧಿಯಲ್ಲಿ ಎಷ್ಟೆಷ್ಟು ಪೋನ್ ಟ್ಯಾಪಿಂಗ್ ಆಗಿದೆ ಎಂಬುದನ್ನು ಗಮನಿಸಿದ್ದೇನೆ. ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಕಾಂಗ್ರೆಸ್ ನಾಯಕರು ಸೇರಿದಂತೆ ಎಲ್ಲರೂ ಕೂಡ ಪೋನ್ ಟ್ಯಾಪಿಂಗ್ ಬಗ್ಗೆ ಆರೋಪಿಸಿ ಮಾತನಾಡಿದ್ದಾರೆ. ನಾನು ಮಾತನಾಡಿಲ್ಲ. ಗುಪ್ತಚರ ಇಲಾಖೆ ಪ್ರಧಾನಿ ಮತ್ತು ಮುಖ್ಯಮಂತ್ರಿಯವರಿಗೆ ಪ್ರತಿ ದಿನ ಮಾಹಿತಿ ನೀಡುತ್ತದೆ ಎಂದು ಹೇಳಿದರು.
ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದಾಗ ಯಾರು ನೇರ ಆರೋಪ ಮಾಡಿರಲಿಲ್ಲ ಎಂದ ಗೌಡರು, ಶಾಸಕರು ರಾಜೀನಾಮೆ ನೀಡಿದ್ದು, ಅವರಿಗೆ ವಿಪ್ ನೀಡಿದ್ದು, ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ವಿಶೇಷ ವಿಮಾನದಲ್ಲಿ ಅವರನ್ನು ಕರೆದೊಯ್ದ ಬಗ್ಗೆ ನಾನು ಪ್ರಸ್ತಾಪಿಸಿಲ್ಲ ಎಂದರು.
ಕುಮಾರಸ್ವಾಮಿ ಅವರು ಈ ಹಿಂದೆ ಆಪರೇಷನ್ ಕಮಲದ ಆಡಿಯೋ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಯಡಿಯೂರಪ್ಪ ಯಾವ ರೀತಿ ಮಾತನಾಡಿದ್ದರು ಎಂಬುದನ್ನು ನಾನು ಗಮನಿಸಿದ್ದೇವೆ. ಇಂತಹ ವಿಚಾರಗಳಿಗೆ ಹೆಚ್ಚು ಒತ್ತುಕೊಡುವುದಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ನೆರೆ ಸಂತ್ರಸ್ಥರಿಗೆ ಪರಿಹಾರ ದೊರೆಯಬೇಕು. ಮೂರು ಪಕ್ಷಗಳು ಅವರ ಸಂಕಷ್ಟ ದೂರ ಮಾಡಲು ಶ್ರಮಿಸಬೇಕು ಎಂದು ಸಲಹೆ ಮಾಡಿದರು.
ಪ್ರಧಾನಿಯವರು ನೆರೆ ಸಂತ್ರಸ್ಥರ ಬಗ್ಗೆ ಗಮನ ಹರಿಸಬೇಕು.ಉತ್ತರ ಕರ್ನಾಟಕ ಭಾಗಕ್ಕೆ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪರಿಹಾರ ಸಾಮಗ್ರಿ ತಲುಪಿಸುತ್ತಿದ್ದೇವೆ.
ನಿನ್ನೆ ಮಹಾಲಕ್ಷ್ಮಿ ಲೇಔಟ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ತುರ್ತಾಗಿ ಹೋಗಬೇಕಿದ್ದ ಕಾರಣ ಬೇಗ ಹೊರಟೆ. ಯಾರ ಒತ್ತಡದಿಂದಲೂ ಹೋರಾಟ ಮಾಡುತ್ತಾ ಬಂದಿಲ್ಲ. ನಿರ್ಭಯವಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ದೇವೇಗೌಡರು ಉತ್ತರಿಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಮಾಜಿ ಸಚಿವ ಎನ್.ಎಂ.ನಭಿ, ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ಬಾಬು, ಜೆಡಿಎಸ್ ಬೆಂಗಳೂರು ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.