ದೆಹಲಿ/ಬಿಹಾರ, ಆ.19- ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರದ ಮಾಜಿ ಸಚಿವ ಜಗನ್ನಾಥ್ ಮಿಶ್ರ (82) ದೀರ್ಘಕಾಲದ ಅನಾರೋಗ್ಯದ ನಂತರ ದೆಹಲಿಯಲ್ಲಿ ಇಂದು ಬೆಳಗ್ಗೆ ನಿಧನರಾದರು.
ಕ್ಯಾನ್ಸರ್ ಪೀಡಿತರಾಗಿದ್ದ ಮಿಶ್ರ ಕೆಲ ಕಾಲದಿಂದ ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೂರು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಮತ್ತು ಕೇಂದ್ರ ಸಚಿವರಾಗಿ ಅವರು ಕಾರ್ಯ ನಿರ್ವಹಿಸಿದ್ದರು.
ಕಾಂಗ್ರೆಸ್‍ನ ಪ್ರಭಾವಿ ನಾಯಕರಾಗಿದ್ದ ಜಗನ್ನಾಥ್ ಮಿಶ್ರ ನಂತರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‍ಸಿಪಿ) ಸೇರಿದ್ದರು. ಬಳಿಕ ಅವರು ಸಂಯುಕ್ತ ಜನತಾದಳದ ಮುಖಂಡರಾಗಿದ್ದರು.
ಬಹುಕೋಟಿ ರೂ.ಗಳ ಮೇವು ಹಗರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂಪ್ರಸಾದ್ ಯಾದವ್ ಅವರೊಂದಿಗೆ ಜಗನ್ನಾಥ್ ಮಿಶ್ರ ಅವರ ಹೆಸರು ಕೂಡ ಕೇಳಿ ಬಂದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಮಿಶ್ರ ಅವರ ನಿಧನಕ್ಕೆ ಬಿಹಾರದ ರಾಜ್ಯಪಾಲ ಫಗು ಚೌವ್ಹಾಣ್, ಮುಖ್ಯಮಂತ್ರಿ ನಿತೀಶ್‍ಕುಮಾರ್ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.