ಬೆಂಗಳೂರು, ಆ.19-ಪ್ರಧಾನಮಂತ್ರಿ ಫಸಲ್ಭೀಮಾ ಯೋಜನೆಯಡಿ ನೆರೆಯಿಂದ ಹಾನಿಗೊಳಗಾದ ಕೃಷಿ ಬೆಳೆಗಳಿಗೆ ಮಧ್ಯಂತರ ಪರಿಹಾರವಾಗಿ ತಕ್ಷಣವೇ 1ಸಾವಿರ ಕೋಟಿ ರೂ.ಗಳನ್ನು ಕೊಡಿಸಲು ಅವಕಾಶವಿದ್ದು, ರಾಜ್ಯ ಸರ್ಕಾರ ಸಮಿತಿಗಳನ್ನು ರಚಿಸಿ ಕೂಡಲೇ ಕ್ರಮಕೈಗೊಳ್ಳಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಒತ್ತಾಯಿಸಿದರು.
ಪಕ್ಷದ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ಫಸಲ್ಭೀಮಾ ಯೋಜನೆ ನಿಯಮಾವಳಿ ಪ್ರಕಾರ ಬರ ಹಾಗೂ ನೆರೆ ಹಾವಳಿಯಿಂದ ಸಂಪೂರ್ಣ ಬೆಳೆ ನಷ್ಟವಾದರೆ ಸ್ಥಳೀಯವಾಗಿ ಸಮಿತಿಗಳನ್ನು ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ಅವರ ನೇತೃತ್ವದಲ್ಲಿ ರಚಿಸಬೇಕು. ವಿಮಾ ಸಂಸ್ಥೆಯ ಪ್ರತಿನಿಧಿ ಅದರಲ್ಲಿರಬೇಕು. ವಾರದೊಳಗಾಗಿ ಸಮಿತಿ ರಚನೆ ಮಾಡಿ ನಷ್ಟದ ಅಂದಾಜು ಮಾಡಿ 15 ದಿನಗಳೊಳಗೆ ವರದಿ ಪಡೆದುಕೊಂಡು ಅದನ್ನು ವಿಮಾ ಕಂಪನಿಗಳಿಗೆ ರವಾನಿಸಬೇಕು.
ಕಂಪನಿಗಳು ತಕ್ಷಣವೇ ಮಧ್ಯಂತರ ಪರಿಹಾರ ಬಿಡುಗಡೆ ಮಾಡಬೇಕು. ಆಗಸ್ಟ್ 1ರಿಂದಲೂ ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.ಸುಮಾರು 30 ಲಕ್ಷ ಎಕರೆಯಲ್ಲಿ ಬೆಳೆದ ಬೆಳೆ ಕೊಚ್ಚಿ ಹೋಗಿದೆ. ಪ್ರತಿ ಎಕರೆಗೆ ಕನಿಷ್ಠ 20 ಸಾವಿರದಂತೆ ಪರಿಹಾರ ಕೊಡಬೇಕಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ ಕನಿಷ್ಠ 5 ಸಾವಿರ ರೂ.ಗಳನ್ನು ಪ್ರತಿ ಎಕರೆಗೆ ಮಧ್ಯಂತರ ಪರಿಹಾರ ನೀಡಬೇಕು.ಇದು ಸುಮಾರು 1 ಸಾವಿರ ಕೋಟಿ ರೂ.ಗಳಷ್ಟಾಗಲಿದೆ.
ನಷ್ಟದ ಸಂಪೂರ್ಣ ಅಂದಾಜು ವರದಿ ಸಲ್ಲಿಕೆಯಾದ ಬಳಿಕ ಉಳಿದ ಪ್ರತಿ ಎಕರೆಗೆ 15 ಸಾವಿರ ರೂ.ಗಳ ಪರಿಹಾರ ಪಾವತಿಯಾದರೆ ಇನ್ನೂ 3 ಸಾವಿರ ಕೋಟಿ ರೈತರ ಖಾತೆಗೆ ಜಮಾವಣೆಯಾಗುತ್ತದೆ. ವಿಮಾಕಂಪನಿಗಳಿಂದಲೇ ಬೆಳೆನಷ್ಟಕ್ಕೆ 4 ಸಾವಿರ ಕೋಟಿ ಪರಿಹಾರ ಸಂದಾಯವಾದಂತಾಗುತ್ತದೆ. ಇದು ಸರ್ಕಾರ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಯೋಜನೆಗಳನ್ನು ಹೊರತುಪಡಿಸಿದ ಪರಿಹಾರವಾಗಿದೆ ಎಂದು ಅವರು ವಿವರಿಸಿದರು.
ಬೆಳೆ ಸಾಲ ಪಡೆದ ಪ್ರತಿಯೊಬ್ಬ ರೈತನಿಂದಲೂ ಕಡ್ಡಾಯವಾಗಿ ವಿಮೆಯ ಕಂತನ್ನು ಪಡೆದುಕೊಳ್ಳಲಾಗಿದೆ. 2016-17ರಲ್ಲಿ ರಾಜ್ಯ ಸರ್ಕಾರ ಮತ್ತು ರೈತರ ಪ್ರೀಮಿಯಂ ಸೇರಿ ವಿಮಾ ಕಂಪನಿಗಳಿಗೆ ಸುಮಾರು 17 ಸಾವಿರ ಕೋಟಿ ರೂ. ಹಣ ಸಂದಾಯವಾಗಿತ್ತು. ಆದರೆ ಬೆಳೆನಷ್ಟಕ್ಕೆ ವಿಮಾ ಕಂಪನಿಗಳು ಪಾವತಿಸಿದ್ದು ಕೇವಲ 6 ಸಾವಿರ ಕೋಟಿ ರೂ.ಮಾತ್ರ.ಉಳಿದ 11 ಸಾವಿರ ಕೋಟಿಗಳನ್ನು ಕಂಪನಿಗಳು ಲಾಭ ಮಾಡಿಕೊಂಡಿವೆ. ಪ್ರತಿ ಬಾರಿಯೂ ವಿಮಾ ಕಂಪನಿಗಳಿಗೆ ಲಾಭವಾಗುವಂತೆ ಸರ್ಕಾರ ವರ್ತಿಸುತ್ತಿದೆ. ಈ ಮೊದಲು ಸರ್ಕಾರವೇ ನೇರವಾಗಿ ನಿರ್ವಹಣೆ ಮಾಡುತ್ತಿದ್ದ ವಿಮಾ ಸೌಲಭ್ಯವನ್ನು 2016ರಿಂದ ಖಾಸಗಿ ಕಂಪನಿಗಳಿಗೆ ಒಪ್ಪಿಸಲಾಗಿದೆ.
ಖಾಸಗಿ ಕಂಪನಿಗಳು ಇಂತಹ ತುರ್ತು ಸಂದರ್ಭದಲ್ಲೂ ಪರಿಹಾರ ನೀಡದೆ ನುಣುಚಿಕೊಳ್ಳಲು ಅವಕಾಶ ನೀಡಬಾರದು. ನಿಯಮಾನುಸಾರವಾಗಿ ಸಮಿತಿ ರಚಿಸಿ ವರದಿ ನೀಡುವ ಮೂಲಕ ವಿಮಾ ಸೌಲಭ್ಯವನ್ನು ರೈತರಿಗೆ ತಲುಪಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಕಬ್ಬು ಇತರ ವಾಣಿಜ್ಯ ಬೆಳೆಗಳನ್ನು ವಿಮೆಯಿಂದ ಹೊರಗಿಡಲಾಗಿದೆ.ನೆರೆ ಹಾವಳಿಯಲ್ಲಿ ತೀವ್ರ ಹಾನಿಗೊಳಗಾಗಿರುವುದು ಇದೇ ರೀತಿಯ ಬೆಳೆಗಳು. ಅವುಗಳನ್ನು ಬಿಟ್ಟು ಒಣ ಬೇಸಾಯದ ಬೆಳೆಗಳನ್ನು ಮಾತ್ರ ವಿಮಾ ಸೌಲಭ್ಯಕ್ಕೆ ಒಳಪಡಿಸಲಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ನೆರೆಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರಿಗೆ ನೆರವಾಗಲು ಎಲ್ಲಾ ಪಕ್ಷಗಳ ಮುಖಂಡರನ್ನೊಳಗೊಂಡ ಉನ್ನತ ಅಧಿಕಾರ ರಾಜ್ಯಮಟ್ಟದ ಸಮಿತಿ ರಚಿಸಿ ಪುನರ್ವಸತಿ ಕಾರ್ಯಗಳನ್ನು ಕೈಗೊಳ್ಳಬೇಕು. ಮನೆ ಕಳೆದುಕೊಂಡವರಿಗೆ ವಾರ್ಷಿಕ 5 ಸಾವಿರ ಬದಲಾಗಿ 10 ಸಾವಿರ ಬಾಡಿಗೆ ನೀಡಬೇಕು, ಕೃಷ್ಣಾ ಮೇಲ್ದಂಡೆ ಹಾಗೂ ಇತರೆ ಪ್ರದೇಶಗಳಲ್ಲಿ ಪದೇ ಪದೇ ಪ್ರವಾಹದಿಂದ ಜನ ಸಂಕಷ್ಟಕ್ಕೀಡಾಗುತ್ತಿದ್ದು, ಅದನ್ನು ತಪ್ಪಿಸಲು ಎತ್ತರದ ಪ್ರದೇಶಗಳಲ್ಲಿ ಪುನರ್ವಸತಿ ಕಲ್ಪಿಸಬೇಕು. ಪ್ರತಿ ಕುಟುಂಬಕ್ಕೆ 350 ಚದರಡಿ ವಿಸ್ತೀರ್ಣದ ಮನೆ ನಿರ್ಮಿಸಿಕೊಡುವ ಯೋಜನೆಯನ್ನು ರಾಜ್ಯಸರ್ಕಾರ ಪ್ರಸ್ತಾಪಿಸಿದೆ. ಅಷ್ಟು ಜಾಗ ಸಾಲುವುದಿಲ್ಲ. ಕನಿಷ್ಠ 800 ಚದರಡಿ ವಿಸ್ತೀರ್ಣದಲ್ಲಿ ಮನೆ ನಿರ್ಮಿಸಿಕೊಡಬೇಕು. ನೆರೆ ಪೀಡಿತ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಉಪವಿಭಾಗಾಧಿಕಾರಿಗಳನ್ನು ಆಗಸ್ಟ್ 26 ರಿಂದ ಸೆಪ್ಟೆಂಬರ್ 21ರವರೆಗೆ ತರಬೇತಿಗಾಗಿ ಕಳುಹಿಸಲು ರಾಜ್ಯ ಸರ್ಕಾರ ಮುಂದಾಗಿದೆ. ನೆರೆ ಪರಿಹಾರ ಕಾರ್ಯಗಳು ಮುಕ್ತಾಯಗೊಳ್ಳುವವರೆಗೂ ಉಪವಿಭಾಗಾಧಿಕಾರಿಗಳನ್ನು ತರಬೇತಿಗೆ ಕಳುಹಿಸಬಾರದು ಎಂದು ಅವರು ಆಗ್ರಹಿಸಿದರು.
ಶಾಸಕ ಆನಂದ್ನ್ಯಾಮೇಗೌಡ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.